ನಕಲಿ ಮತದಾರರ ಚೀಟಿ ಸೃಷ್ಟಿಸಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ತಂತ್ರ: ಮೋದಿ
ರಾಜ್ಯ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ನಕಲಿ ಮತದಾನ ಮಾಡಿ ಗೆಲ್ಲಲು ಕಾಂಗ್ರೆಸ್ ಯತ್ನಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಚಿಕ್ಕಮಗಳೂರು : ರಾಜ್ಯ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ನಕಲಿ ಮತದಾನ ಮಾಡಿ ಗೆಲ್ಲಲು ಕಾಂಗ್ರೆಸ್ ಯತ್ನಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿಕ್ಕಮಗಳೂರಿನಲ್ಲಿ ಪ್ರಚಾರ ಕಾರ್ಯ ಕೈಗೊಂಡ ಮೋದಿ, ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮತದಾರರ ಗುರುತಿನ ಪತ್ರಗಳ ಪತ್ತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಕಲಿ ವೋಟರ್ ಐ ಡಿ ಸೃಷ್ಟಿಸಿ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಹವಣಿಸುತ್ತಿದೆ. ಸೋಲುವ ಭಯ, ಅವರನ್ನು ಇಷ್ಟೊಂದು ಹತಾಶೆಯ ಮಟ್ಟಕ್ಕೆ ಇಳಿಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನಾಲ್ಕು ಲಕ್ಷ ಮತದಾರರು ಇರುವ ಕ್ಷೇತ್ರದಲ್ಲಿ ಒಂದು ಲಕ್ಷ ನಕಲಿ ಮತದಾರರನ್ನು ಸೇರಿಸುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಇಂತಹವರಿಗೆ ನೀವೇ ಪಾಠ ಕಲಿಸಬೇಕಿದೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಭಾರತದ ಆರ್ಥಿಕ ಪರಸ್ಥಿತಿಯ ಬಗ್ಗೆ ಜಗತ್ತಿನ ಪ್ರತಿಷ್ಠಿತ ರೇಟಿಂಗ್ ಏಜೆನ್ಸಿಗಳು ಸದಾಭಿಪ್ರಾಯ ವ್ಯಕ್ತಪಡಿಸಿದರೂ ಕೂಡಾ ಕಾಂಗ್ರೆಸ್ ಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಲೇ ಸ್ಪಷ್ಟವಾಗಿದೆ, ಕಾಂಗ್ರೆಸ್ ಗೆ ಭಾರತದ ಅಭಿವೃದ್ಧಿ ಆಗುವುದೇ ಬೇಕಿಲ್ಲ. ಕಾಂಗ್ರೆಸ್ ಗೆ ಈ ದೇಶದ ಜನತೆಯ ಬಗ್ಗೆ ಯಾವ ಕಾಳಜಿಯೂ ಇಲ್ಲ. ಅವರಿಗೆ ಇರೋದು ಒಂದೇ ಚಿಂತೆ. ಹೇಗಾದರೂ ಮಾಡಿ ಅಧಿಕಾರದಲ್ಲಿರೋದು. ಬೇರೆ ಯಾರಾದರೂ ಪ್ರಧಾನಮಂತ್ರಿಯಾದರೆ ಅದನ್ನು ಅರಗಿಸಿಕೊಳ್ಳುವುದೂ ಶಕ್ತಿಯೂ ಕಾಂಗ್ರೆಸ್ ನಾಯಕತ್ವಕ್ಕೆ ಆಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.