Sandalwood Star Director Kashinath: ಕನ್ನಡ ಚಿತ್ರರಂಗದ ಸಿದ್ಧ ಸೂತ್ರಗಳನ್ನೆಲ್ಲ ಪಕ್ಕಕ್ಕಿಟ್ಟು, ಹೊಸದೊಂದು ಸಿನಿಮಾ ವ್ಯಾಕರಣವನ್ನೇ ಪರಿಚಯಿಸಿದ ಖ್ಯಾತಿ ಕನ್ನಡ ಚಿತ್ರರಂಗದ ಖ್ಯಾತ ನಾಯಕ, ನಿರ್ದೇಶಕ & ನಿರ್ಮಾಪಕ ಕಾಶಿನಾಥ್ ಅವರದ್ದು. ಸಿನಿಮಾವನ್ನು ಹೀಗೆಯೇ ಯಾಕೆ ಮಾಡಬೇಕು..? ಹೀಗೆ ಯಾಕೆ ಮಾಡಬಾರದು ಅನ್ನೋ ಹೊಸ ಆಲೋಚನೆಗೆ ಮುನ್ನುಡಿ ಬರೆದವರು ಕಾಶಿನಾಥ್.


COMMERCIAL BREAK
SCROLL TO CONTINUE READING

ಕನ್ನಡ ಚಿತ್ರರಂಗದಲ್ಲಿದ್ದ ಮಡಿವಂತಿಕೆ.. ಸಂಪ್ರದಾಯ.. ಸಂಸ್ಕ್ರತಿಯೆನ್ನೆಲ್ಲ ಪಾಲಿಸದೇ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಕಾಶಿನಾಥ್ ಅವರಿಗೆ ನಟನಾಗಲು ಬೇಕಾದ ಸೌಂದರ್ಯ ಇರಲಿಲ್ಲ. ಅಂದು.. ಇಂದು.. ಎಂದೆಂದೂ ಮಾನದಂಡವಾದ ಆಕರ್ಷಕ ಮೈ ಕಟ್ಟು ಇರಲಿಲ್ಲ.. ಚೆಲುವ ಎಂಬ ಬಿರುದು ಸಹ ಇರಲಿಲ್ಲ. ಆದರೂ ಅಸಾಧ್ಯವಾದದನ್ನು ಸಾಧ್ಯವಾಗಿಸಿ, ಹಾಸ್ಯದ ಮೂಲಕವೇ ಕ್ರಾಂತಿ ಮಾಡಿದವರು ಕಾಶೀನಾಥ್. ದುರಂತ ಅಂದ್ರೆ ಕಾಶಿನಾಥ್ ಅಂದಕೂಡಲೇ ಇಂದಿನ ಜನರೇಶನ್ನಿನವರಿಗೆ ಒಬ್ಬ ಹಾಸ್ಯನಟನಾಗಿ ಮಾತ್ರ ಗೋಚರವಾಗ್ತಾರೆ.


ಆದರೆ 1980-90ರ ದಶಕದ ಸಿನಿಮಾಗಳನ್ನು ನೋಡಿದವರಿಗೆ ಕಾಶಿನಾಥ್ ಒಬ್ಬ ಪ್ರತಿಭಾನ್ವಿತ ನಟ, ನಿರ್ದೇಶಕ ಹೌದು ಅನ್ನೋದು ಗೊತ್ತಿರುತ್ತದೆ. ಇನ್ನೂ ಚಿತ್ರರಂಗದವರಿಗೆ ಕಾಶಿಯವರ ಮತ್ತಷ್ಟು ಪ್ರತಿಭೆಗಳ ಬಗ್ಗೆಯೂ ಗೊತ್ತಿದೆ. ಆದರೆ, ಇದೆಲ್ಲವನ್ನೂ ಮೀರಿದ ಮತ್ತಷ್ಟು ಪ್ರತಿಭೆ, ಚಿಂತನೆಗಳು ಕಾಶಿನಾಥ್‌ ಅವರಲ್ಲಿದ್ವು. ಕಾಶಿನಾಥ್ ಒಬ್ಬ ಸೈಂಟಿಸ್ಟ್ ಆಗಬೇಕೆಂದುಕೊಂಡಿದ್ದರು ಅನ್ನೋದು ಕಡಿಮೆ ಜನಕ್ಕೆ ಗೊತ್ತಿರೋ ಸಂಗತಿ. ಹೌದು, ಅಸಲಿಗೆ ಕಾಶಿನಾಥ್ ಓದಿದ್ದು B.Sc 1970ರ ದಶಕದ ಯುವಕರು ಕನಸು ಕಾಣ್ತಿದ್ದಂತೆ ಇವರು ಕೂಡ ಅಮೇರಿಕಕ್ಕೆ ಹೋಗಬೇಕು ಅಂತಾ ಕನಸು ಕಂಡಿದ್ದರು. ತಾನೊಬ್ಬ ದೊಡ್ಡ ಸೈಂಟಿಸ್ಟ್ ಆಗಬೇಕು, ಆ ಮೂಲಕ ಮನುಕುಲಕ್ಕೆ ಒಳಿತಾಗುವಂತಹದ್ದೇನಾದರೂ ಕಂಡುಹಿಡಿಯಬೇಕು ಅಂತಾ ಕನಸು ಕಂಡಿದ್ರಂತೆ ಕಾಶಿನಾಥ್. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆಯ ಕಾರ್ಯಕ್ರಮದಲ್ಲಿ ಕಾಶಿನಾಥ್ ಈ ವಿಚಾರವನ್ನು ಹಂಚಿಕೊಂಡಿದ್ದರು ಕೂಡ.


ಇದನ್ನೂ ಓದಿ: ಅಕ್ಷಯ ತೃತೀಯದಂದೇ ‘ಶಿವಶರಣ ಮೋಳಿಗೆ ಮಾರಯ್ಯ’ ಆರಂಭ: ಭಕ್ತಿಪ್ರಧಾನ ಚಿತ್ರಕ್ಕೆ ಗವಿಮಠದ ಶ್ರೀಗಳಿಂದ ಚಾಲನೆ


ಆದರೆ B.Scಯಲ್ಲಿದ್ದಾಗ ಕಾಶಿನಾಥ್ ಬಣ್ಣದ ಸೆಳೆತಕ್ಕೆ ಸಿಲುಕಿದರು. ಇದಕ್ಕೆ ಕೈಗನ್ನಡಿ ಅನ್ನುವಂತೆ ಮೊದಲ ವರ್ಷ ಉತ್ತಮ ಅಂಕಗಳೊಂದಿಗೆ ತೇಗರ್ಡೆಯಾಗಿದ್ದ ಕಾಶಿನಾಥ್ ೨ನೇ ವರ್ಷ ಸ್ವಲ್ಪ ಡಲ್ಲಾದರು. ೩ನೇ ವರ್ಷ ಮತ್ತಷ್ಟು ಡಲ್ಲಾದರು. ಅಂದಹಾಗೆ ಕಾಶಿನಾಥ್ ಅವರದ್ದು ಉದ್ಯಮದ ಹಿನ್ನೆಲೆಯಾಗಿತ್ತು. ಸಿನಿಮಾದ ಗಂಧ ಗಾಳಿ ಗೊತ್ತಿರದ ಕುಟುಂಬ. ಎಲ್ಲಕ್ಕಿಂತ ಹೆಚ್ಚಾಗಿ ಕುಂದಾಪುರದಲ್ಲಿ ಆಗಿನ್ನೂ ಯಾರು ಚಿತ್ರರಂಗಕ್ಕೆ ಬಂದಿರಲಿಲ್ಲ. ಹೊಟೇಲ್, ಕಿರಾಣಿ ಸ್ಟೋರ್ ಮತ್ತು ಬ್ಯಾಂಕ್‌ನಲ್ಲಿಯೇ ಅನೇಕರು ಕೆಲಸ ಮಾಡ್ತಿದ್ದ ದಿನಗಳವು. ಈ ಕಾರಣಕ್ಕೆ ಕಾಶಿನಾಥ್ ಅವರ ತಂದೆ ಸುತಾರಾಂ ಒಪ್ಪಲಿಲ್ಲ. ಎಲ್ಲಾ ತಂದೆ-ತಾಯಿಯಂತೆ ಸಿನಿಮಾ ವಿಚಾರವಾಗಿ ಕಾಶಿನಾಥ್‌ಗೆ ಬೈದಿದ್ದರಂತೆ. 


ಆದರೆ ವಿಧಿ ಲಿಖಿತ.. ಕಾಶಿನಾಥ್ ತಂದೆ-ತಾಯಿಯ ಮಾತನ್ನು ಧಿಕ್ಕರಿಸಿ ಕನ್ನಡ ಚಿತ್ರರಂಗದತ್ತ ಬಂದರು. ಸುರೇಶ್ ಹೆಬ್ಳಿಕರ್, ರಾಮದಾಸ್ ನಾಯ್ಡುರಂತಹ ಪ್ರತಿಭಾನ್ವಿತವರ ಜೊತೆ ಸೇರಿ ʼಅಸೀಮಾʼ ಅನ್ನೋ ತಂಡ ಕಟ್ಟಿದರು. ಒಂದು ಸಿನಿಮಾ ಕ್ಲಬ್ ಮಾಡಿಕೊಂಡರು. ಈ ಕ್ಲಬ್‌ನಲ್ಲಿ ಹಲವು ವಿದೇಶಿ ಚಿತ್ರಗಳನ್ನು ನೋಡ್ತಾ ಸಿನಿಮಾ ಬಗ್ಗೆ ತಮ್ಮದೇಯಾದ ಚಿಂತನೆಗಳನ್ನು ಬೆಳೆಸಿಕೊಂಡ್ರು ಕಾಶಿನಾಥ್. ಆ ಕಾಲದಲ್ಲಿ ಕಾಶಿನಾಥ್ ʼಸ್ಲಿಪ್ʼ ಅನ್ನೋ ಕಿರುಚಿತ್ರ ಮಾಡಿದ್ದರು. ಈ ಕಿರುಚಿತ್ರವನ್ನು ʼಅಸೀಮಾʼ ನಡೆಸಿದ ಪ್ರದರ್ಶನದಲ್ಲಿ ನೋಡಿ ವಿದೇಶಿ ನಿರ್ದೇಶಕರೂ ಮೆಚ್ಚಿಕೊಂಡಿದ್ದರು. ಅಲ್ಲಿಂದ ಮುಂದೆ ಕಾಶಿನಾಥ್‌ಗೆ ಪೂರ್ಣಪ್ರಮಾಣದ ಸಿನಿಮಾ ಮಾಡೋ ಆತ್ಮವಿಶ್ವಾಸ ಬಂತು. ಸುರೇಶ್ ಹೆಬ್ಳಿಕರ್‌ರನ್ನು ನಾಯಕನನ್ನಾಗಿಸಿ ʼಅಪರೂಪದ ಅತಿಥಿಗಳುʼ ಅನ್ನೋ ಸಿನಿಮಾ ಮಾಡಿದ್ರು.


ಮೊದಲ ಸಿನಿಮಾನೇ ಸಕ್ಸಸ್ ಕಂಡ್ತು. ಬಳಿಕ ʼಅಪರಿಚಿತʼ ಅನ್ನೋ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಮಾಡಿದ್ರು. ಹಾಲಿವುಡ್ ಮಾದರಿಯಲ್ಲಿದ್ದ ಈ ಥ್ರಿಲ್ಲರ್ ಮೂವಿ ನೋಡಿ ಆವತ್ತಿಗೆ ಇಡೀ ದಕ್ಷಿಣ ಭಾರತವೇ ಬೆರಗಾಗಿ ಹೋಗಿತ್ತು. ತೆಲುಗಿನಲ್ಲಿ ರಿಮೇಕ್ ಆದ ಈ ಸಿನಿಮಾ ಅಲ್ಲಿಯೂ ಶತದಿನ ಆಚರಿಸ್ತು. ಬಳಿಕ ಹಿಂದಿಗೂ ಈ ಸಿನಿಮಾ ರಿಮೇಕ್ ಆಯ್ತು. ಹಿಂದಿಯಲ್ಲಿ ʼಬೇಶಕ್ʼ ಹೆಸರಿನಲ್ಲಿ ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದು ಖುದ್ದು ಕಾಶಿನಾಥ್ ಅವರೇ.


ಇದನ್ನೂ ಓದಿ: Orhan Awatramani: ಸೆಲೆಬ್ರಿಟಿ ಒರ್ರಿಗೆ 25 ಲಕ್ಷ ಕೊಡೋದು ಯಾಕೆ..? ಒರ್ರಿಯನ್ನ ಟಚ್‌ ಮಾಡಿದ್ರೂ ಟ್ಯಾಕ್ಸ್ ಕಟ್ಬೇಕು ಗೊತ್ತೇ..!


ಇವತ್ತಿಗೂ ನಮ್ಮ ನಿರ್ದೇಶಕರು ಬಾಲಿವುಡ್‌ಗೆ ಹೋಗ್ತಿದ್ದೀವಿ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಾರೆ. ಆದ್ರೆ ಕಾಶಿನಾಥ್ 1981ರಲ್ಲಿ ಬಾಲಿವುಡ್‌ನಲ್ಲಿ ಸಿನಿಮಾ ನಿರ್ದೇಶನ ಮಾಡಿ ಬಂದಿದ್ದರು. ಮಿಥುನ್ ಚಕ್ರವರ್ತಿ, ಯೋಗಿತಾ ಬಾಲಿ ನಟನೆಯಲ್ಲಿ ಬಂದ ʼಬೇಶಕ್ʼ ಸಿನಿಮಾ ಬಾಲಿವುಡ್ ಮಂದಿಯನ್ನೂ ಬೆರಗುಗೊಳಿಸಿತ್ತು. ಕೇವಲ ಹಿಂದಿಯಲ್ಲಿ ಅಷ್ಟೇ ಅಲ್ಲ ಮಲಯಾಳಂನಲ್ಲಿಯೂ ʼಅಂದಕಾಲತ್ತಿಲ್ʼ ಎಂದು ಈ ಸಿನಿಮಾ ರಿಮೇಕ್ ಆಗಿತ್ತು. ಇನ್ನೂ ಕಾಶಿನಾಥ್ ತಾವೇ ನಾಯಕನಾಗಿ ನಟಿಸಿ ನಿರ್ದೇಶಿಸಿದ ಸಿನಿಮಾ ʼಅನುಭವʼ ಕೂಡ ಹಿಂದಿಗೆ ರಿಮೇಕ್ ಆಯ್ತು. ಅದನ್ನೂ ಕೂಡ ಹಿಂದಿಯಲ್ಲಿ ಡೈರೆಕ್ಟ್ ಮಾಡಿದ್ದು ಖುದ್ದು ಕಾಶಿನಾಥ್. ಶೇಖರ್ ಸುಮನ್, ಪದ್ಮಿನಿ ಕೊಲ್ಹಾಪುರಿ ನಟಿಸಿದ ʼಅನುಭವ್ʼ ಸಿನಿಮಾ ಬಾಲಿವುಡ್ ನಟ-ನಿರ್ದೇಶಕರನ್ನೇ ದಂಗು ಬಡಿಸಿತ್ತು. ಆಗ ಕಾಶಿನಾಥ್ ಅವರನ್ನು ಮೆಚ್ಚಿಕೊಂಡವರಲ್ಲಿ ಈಗ ಮಿಸ್ಟರ್ ಪರ್ಫಕ್ಟ್ ಅಂತಾ ಹೆಸರು ಪಡೆದಿರೋ ಅಮೀರ್ ಖಾನ್ ಕೂಡ ಒಬ್ರು. ಮುಂದೆ ಕಾಶಿನಾಥ್ ʼಅವಳೇ ನನ್ ಹೆಂಡತಿʼ ಸಿನಿಮಾ ಕೂಡ ʼಜವಾನಿ ಜಿಂದಾಬಾದ್ʼ ಹೆಸರಿನಲ್ಲಿ ಹಿಂದಿಯಲ್ಲಿ ರಿಮೇಕ್ ಆಯ್ತು. ಅದ್ರಲ್ಲಿ ಕಾಶಿನಾಥ್ ನಟಿಸಿದ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ರು.


ಹೀಗೆ ಆವತ್ತಿಗೆ ಕಾಶಿನಾಥ್ ಹೆಸರು ಟಾಲಿವುಡ್, ಕಾಲಿವುಡ್. ಮಾಲಿವುಡ್, ಬಾಲಿವುಡ್ ಎಲ್ಲೆಡೆಯೂ ರಾರಾಜಿಸ್ತಾ ಇತ್ತು. ಚಿಕ್ಕ ಬಜೆಟ್‌ನಲ್ಲಿ ಮನಮುಟ್ಟುವ ಕಾಶಿನಾಥ್‌ರ ಕಲೆಗೆ ಆವತ್ತಿನ ಸಿನಿಕರ್ಮಿಗಳು ಬೆರಗಾಗಿ ಹೋಗಿದ್ರು. ಒಟ್ನಲ್ಲಿ ಕಾಶಿನಾಥ್ ಕನ್ನಡ ಚಿತ್ರರಂಗದ ಅಪರೂಪದ ಅತಿಥಿಯಾಗಿದ್ದರು. ಅಪರಿಚಿತನಾಗಿಯೇ ಬಂದು ತಾವು ಕಂಡು ಕೇಳಿದ ಅನುಭವದಿಂದಲೇ ಅಸಾಧ್ಯವಾದ್ದದ್ದನ್ನು ನಿರ್ಮಿಸಿ ಚಲನಚಿತ್ರ ಕಲೆಗೆ ವಿಶೇಷ ನೆಲೆಗಟ್ಟನ್ನೂ ನಿರ್ಮಿಸಿ ಕೊಟ್ಟು ಹೋದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.