`ಜೈಹೋ` ವಿಜಯ ಪ್ರಕಾಶ್ ಜೀವನ ಪಯಣ!
2008ರಲ್ಲಿ `ಕವಿತೆ, ಕವಿತೆ` ಹಾಡಿನ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ವಿಜಯ್ ಹಾಡಿದರು.
ಸಂಗೀತ ಲೋಕದಲ್ಲಿ ವಿಜಯದ ಪತಾಕೆ ಹಾರಿಸುತ್ತಿರುವ, 'ಜೈಹೋ' ವಿಜಯ ಪ್ರಕಾಶ್ ಎಂದೇ ಖ್ಯಾತಿ ಪಡೆದಿರುವ 'ವಿಪಿ' ಗೆ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಅವರ ಜೀವನದ ಪ್ರಮುಖ ಘಟ್ಟಗಳನ್ನು ಮೆಲುಕು ಹಾಕುತ್ತಾ ಅದನ್ನು ನಿಮಗೂ ಪರಿಚಯಿಸುವ ಆಶಯ ನಮ್ಮದು.
'ಜೈ ಹೋ' ಖ್ಯಾತಿಯ ವಿಜಯ್ ಪ್ರಕಾಶ್ ಭಾರತೀಯ ಸಂಗೀತ ಲೋಕದ ಖ್ಯಾತ ಹಿನ್ನೆಲೆ ಗಾಯಕ. ವಿದೇಶಗಳಲ್ಲೂ ಕನ್ನಡದ ಸಂಗೀತ ಕಂಪನ್ನು ಹರಡಿರುವ ವಿಜಯ್ ಪ್ರಕಾಶ್ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡು, ನಂತರ ಪಾಶ್ಚಾತ್ಯ ಸಂಗೀತವನ್ನೂ ಕಲಿತಿದ್ದಾರೆ. ಇವರು ಫೆಬ್ರವರಿ 21, 1976ರಲ್ಲಿ ಮೈಸೂರಿನಲ್ಲಿ ಜನಿಸಿದರು. ಸೈಂಟ್ ಥಾಮಸ್ ಶಾಲೆಯ ವಿದ್ಯಾರ್ಥಿ. ಚಿಕ್ಕಂದಿನಿಂದಲೂ ಇವರಿಗೆ ಸಂಗೀತವೆಂದರೆ ಅಚ್ಚು-ಮೆಚ್ಚು.
ವಿಜಯ್ ಚಿಕ್ಕವರಿದ್ದಾಗ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ ವೇದಿಕೆಯಲ್ಲಿ ಲಂಬೋಧರ...... ಹಾಡನ್ನು ಹಾಡಿದ್ದರು. ಆಗ ಅವರಿಗೆ ದೊರೆತ ಬಹುಮಾನ 'ಗ್ಲಾಸ್'. 'ವಿಪಿ' ಇಂದಿಗೂ ಅದನ್ನು ಜೋಪಾನವಾಗಿಟ್ಟು ಕೊಂಡಿದ್ದಾರೆ.
ಇಂಜಿನಿಯರಿಂಗ್ ಸೇರಿದ್ದ ವಿಪಿ ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲ ಹೊಂದಿದ್ದರು. ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ವಿದ್ಯಾಭ್ಯಾಸದಲ್ಲಿ ಗಮನ ಹರಿಸಲಾಗದೆ ಬಹಳ ದೊಡ್ಡ ತೀರ್ಮಾನ ತೆಗೆದುಕೊಂಡರು. ಏಕೆ ಹೋಗುತ್ತಿದ್ದೇನೆ? ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೂ ಗೊತ್ತಿಲ್ಲದೆ, ತಂದೆ-ತಾಯಿಗೆ ಪತ್ರ ಬರೆದಿಟ್ಟು ಕೈಯಲ್ಲಿ 700 ರೂಪಾಯಿ, ಬ್ಯಾಗ್ ನಲ್ಲಿ ಒಂದುಜೊತೆ ಬಟ್ಟೆ ಹಾಕಿಕೊಂಡು ಹೊರಟರು. ಮೈಸೂರಿನಿಂದ ಬೆಂಗಳೂರಿಗೆ ಬಂದ ವಿಪಿ, ಅಲ್ಲಿಂದ ತಿರುಪತಿಗೆ ಹೋದರು. ಅಂದಿನಿಂದ ಇಂದಿನವರೆಗೂ ವಿಜಯ್ ಪ್ರತಿವರ್ಷ ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡುತ್ತಾರೆ. ತಿರುಪತಿಯಿಂದ ಬಾಂಬೆಗೆ ಪ್ರಯಾಣ ಬೆಳೆಸಿದ ವಿಪಿ ಜೀವನ ಮುಂದೆ ಬಹಳ ಕಷ್ಟಕರವಾಗಿತ್ತು. ತಿನ್ನಲು ಏನೂ ಇರದ ಅವರಿಗೆ ರೈಲ್ವೇ ನಿಲ್ದಾಣವೇ ಮಲಗುವ ತಾಣವಾಗಿತ್ತು.
ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರದ ವಿಪಿ, 'ನಿರ್ಮಾ ಆಡ್'ಗಾಗಿ ಹಾಡಿದರು. ಆದರೆ ರೆಕಾರ್ಡ್ ಮಾಡಿದ್ದು 'ಕೆಲ್ಲಾಗ್ಸ್ ಆಡ್' ಜಾಹಿರಾತಿಗಾಗಿ. ಜಾಹಿರಾತುಗಳಿಗೆ ಹಾಡುವ ಮುಖಾಂತರ ಅವರ ವೃತ್ತಿ ಜೀವನ ಪ್ರಾರಂಭವಾಯಿತು. ಅವರು ಮೊದಲು ಪಡೆದ ಸಂಭಾವನೆ 2,700 ರೂಪಾಯಿ. ನಂತರ ರೇಡಿಯೋಗಳಲ್ಲಿ ಹಾಡಲು ಪ್ರಾರಂಭಿಸಿದರು. ವಾಯ್ಸ್ ಓವರ್ಗಳಲ್ಲಿ ಹೆಸರುವಾಸಿಯಾಗಿದ್ದ ಮಹಾತಿ ಅವರನ್ನು ವಿಪಿ ಭೇಟಿ ಮಾಡಿದ್ದು 'ರೇಡಿಯೋ ವಾಣಿ' ಸ್ಟುಡಿಯೋದಲ್ಲೇ. ತೆಲುಗು ಸೀರಿಯಲ್‍ಗೆ ಹಾಡಿಗಾಗಿ ವಿಪಿ ಮತ್ತು ಮಹಾತಿ ಒಟ್ಟಾಗಿ ಹಾಡಿದರು. ಕೆಲದಿನಗಳ ನಂತರ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತು. ನಂತರ 2001ರಲ್ಲಿ ತಿರುಪತಿಯಲ್ಲಿ ಅವರು ವಿವಾಹವಾಗುತ್ತಾರೆ. ಕಾವ್ಯ ಪ್ರಕಾಶ್ ಎಂಬ ಮುದ್ದು ಮುಖದ ಚಲುವೆ ಈ ಸುಂದರ ದಂಪತಿಯ ಪುತ್ರಿ.
ಈ ಭಾವಚಿತ್ರವನ್ನು ವಿಜಯ್ ಪ್ರಕಾಶ್ ಅವರ ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ
ಹಿಂದಿ, ಕನ್ನಡ, ತಮಿಳ್, ತೆಲುಗು, ಮಲೆಯಾಳಂ, ಮರಾಠಿ, ಇಂಗ್ಲೀಷ್ ಮತ್ತು ಉರ್ದು ಭಾಷೆಗಳಲ್ಲಿ ವಿಪಿ ಹಾಡಿದ್ದಾರೆ. 1997ರಲ್ಲಿ ಸಂಗೀತ ಲೋಕಕ್ಕೆ ಕಾಲಿಟ್ಟು ಜಾಹಿರಾತು ಮತ್ತು ಹಿನ್ನೆಲೆ ಗಾಯಕರಾಗಿ ಹಾಡುತ್ತಿದ್ದ ವಿಜಯ್ ಪ್ರಕಾಶ್, 2004ರಲ್ಲಿ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ಸ್ವದೇಸ್ ಎಂಬ ಹಿಂದಿ ಚಿತ್ರದಲ್ಲಿ "ಪಲ್ ಪಲ್ ಹಾಯ್ ಭಾರಿ" ಗೀತೆಗೆ ಮೊದಲ ಬಾರಿಗೆ ಹಾಡಿದರು. 2008ರಲ್ಲಿ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ "ಜೈ ಹೋ" ಹಾಡಿನಲ್ಲಿ ಸಹ ಗಾಯಕರಾಗಿ ಹಾಡುವ ಮೂಲಕ ಪ್ರಪಂಚದಾದ್ಯಂತ ಹೆಸರುವಾಸಿಯಾದರು. ಅದೇ ವರ್ಷ ಗಾಳಿಪಟ ಚಿತ್ರದ 'ಕವಿತೆ, ಕವಿತೆ' ಹಾಡಿನ ಮೂಲಕ ಮೊದಲ ಬಾರಿಗೆ ಕನ್ನಡದ ಚಿತ್ರದಲ್ಲಿ ಹಾಡಿದರು. ಇವರ ಸಂಗೀತ ಸಾಧನೆಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಪ್ರಸ್ತುತ 2017ರಲ್ಲಿ ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಹಾಡಿದ "ಬೆಳಗೆದ್ದು ಯಾರಾ ಮುಖವ" ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲಂ ಫೇರ್ ಪ್ರಶಸ್ತಿಗೆ ವಿಜಯ್ ಪ್ರಕಾಶ್ ಭಾಜನರಾಗಿದ್ದಾರೆ.
'ಹಸಿವಿನ ಬಗ್ಗೆ ವಿಜಯ್ ಮಾತು'
ಝೀ ಕನ್ನಡ ವಾಹಿನಿಯಲ್ಲಿ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕ್ ಅಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯ್ ಪ್ರಕಾಶ್ ಹಸಿವಿನ ಬಗ್ಗೆ ಈ ರೀತಿ ಹೇಳಿದರು - ಮೊದಲು ನಾನು ಮುಂಬೈಗೆ ಹೋದಾಗ ಆನಂದ್ ಮಿಲಿಂದ್ ಅಂತ ಮ್ಯೂಸಿಕ್ ಡೈರೆಕ್ಟರ್‍ರವರ ಮನೆ ಗೊತ್ತಾಯ್ತು. ಅಲ್ಲಿ ಹೋದಾಗ ಅವರು ಸುರೇಶ್ ವಾಡ್ಕರ್ ಹತ್ರ ನನ್ನನ್ನು ಕಳುಹಿಸಿದ್ರು. ಅವರ ಹತ್ರ ಹೋಗಿ ಹಾಡಿದ್ಮೇಲೆ ನನ್ನ ವಾಯ್ಸ್ ಅನ್ನು ಅವರು ಇಷ್ಟ ಪಟ್ಟರು. ನಂತರ ರಾಧಾ ಕೃಷ್ಣ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ರು. ಇದ್ದ ಒಂದು ಬಟ್ಟೆಯನ್ನು ಸಮುದ್ರದ ನೀರಲ್ಲಿ ಒಗೆದು ಒಣಗಿಸಿ ಹಾಕೊಳ್ತಿದ್ದೆ. ತಿನ್ನೋಕೆ ದುಡ್ಡು ಇರ್ಲಿಲ್ಲ. ನಾನು ಇದ್ದ ಸ್ಥಿತಿ ನೋಡಿ ಅವರು ನನಗೆ 100 ರೂಪಾಯಿ ಕೊಟ್ಟು ಊಟ ಮಾಡಿ ಬಾ ಅಂತ ಹೇಳಿದ್ರು. ಜೀವನದಲ್ಲಿ ಎರಡು ತರಹ ಹಸಿವು ಇರುತ್ತದೆ. ದೇವರ ದಯೆಯಿಂದ ಎಲ್ಲಾ ಇದ್ದರೂ ತಿನ್ನುವುದಕ್ಕೆ ಆಗಲ್ಲ. ಅದೊಂಥರಾ ದರ್ಪದ ಹಸಿವು. ಆದರೆ ಎದುರುಗಡೆ ಊಟ ಇದ್ದರೂ, ಕೊಂಡುಕೊಳ್ಳುವುದಕ್ಕೆ ದುಡ್ಡಿರಲ್ಲ. ಆ ಹಸಿವು ಬಹಳ ಕಷ್ಟ. ಅವತ್ತು ಅವರು ದುಡ್ಡು ತಗೊಂಡು ಹೊಟ್ಟೆ ತುಂಬಾ ತಿಂದೆ ಎಂದು ಅವರ ಆ ದಿನಗಳನ್ನು ನೆನಪಿಸಿಕೊಂಡರು.
ಜೈ ಹೋ ಗೀತೆಯ ಮೂಲಕ ಮನೆಮಾತಾದ ನಮ್ಮ ಕರುನಾಡ ಮಲ್ಲಿಗೆ ನಗರಿ ಮೈಸೂರಿನ ವಿಜಯ್ ಪ್ರಕಾಶ್ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂಬುದೇ ಎಲ್ಲರ ಆಶಯ.