ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಗಿಣಿ ದ್ವಿವೇದಿ ನಿರ್ಧಾರ
ರಾಗಿಣಿ ಅವರು ಸರ್ಕಾರಿ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದೂ ಸೇರಿದಂತೆ ಶಾಲಾ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ.
ಬೆಂಗಳೂರು: ಸ್ಯಾಂಡಲ್'ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಕೆಲವು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿದ್ದು, 'ಸರ್ಕಾರಿ ಶಾಲೆ ಉಳಿಸಿ' ಆಂದೋಲನ ಆರಂಭಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದರೂ, ಮೂಲಭೂತ ಸೌಕರ್ಯಗಳಿಲ್ಲದ ಹಿನ್ನೆಲೆಯಲ್ಲಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಹಿಂಜರಿಯುತ್ತಿದ್ದಾರೆ. ವಿಧ್ಯಾರ್ಥಿಗಳಿಗೆ ಕೂರಲು ಬೆಂಚಿಲ್ಲ, ಹಲವೆಡೆ ಶಾಲೆಗಳಲ್ಲಿ ಬೋರ್ಡೆ ಇಲ್ಲ. ಮತ್ತೊಂದೆಡೆ ಕೊಠಡಿಗಳೇ ಇಲ್ಲ. ಒಂದಲ ಎರಡಲ್ಲ, ಹಲವು ಸಮಸ್ಯೆಗಳನ್ನು ಸರ್ಕಾರಿ ಶಾಲೆಗಳು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಗಿಣಿ ದ್ವಿವೇದಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.
ತಮ್ಮ ಸ್ನೇಹಿತ ಅನಿಲ್ ಶೆಟ್ಟಿ ಜೊತೆ ಸೇರಿ 'ಸರ್ಕಾರಿ ಶಾಲೆ ಉಳಿಸಿ' ಯೋಜನೆ ಹಮ್ಮಿಕೊಂಡಿರುವ ರಾಗಿಣಿ, ಸರ್ಕಾರಿ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದೂ ಸೇರಿದಂತೆ ಶಾಲಾ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ, ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲು ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದು, ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದೆ.