ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ: ಸಪ್ನಾ ಚೌಧರಿ ಸ್ಪಷ್ಟನೆ
ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಹಾಗೆಯೇ ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸುವುದಿಲ್ಲ ಎಂದು ಸಪ್ನಾ ಚೌಧರಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಖ್ಯಾತ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಾವು ಕಾಂಗ್ರೆಸ್ ಸೇರ್ಪಡೆಯಾಗಿರುವ ವರದಿಯನ್ನು ತಳ್ಳಿಹಾಕಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಹಾಗೆಯೇ ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸುವುದಿಲ್ಲ. ಅಷ್ಟಕ್ಕೂ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರನ್ನು ನಾನು ಭೇಟಿಯೇ ಮಾಡಿಲ್ಲ. ಭವಿಷ್ಯದಲ್ಲಿಯೂ ಸಹ ಕಾಂಗ್ರೆಸ್ ಸೇರುವ ಆಲೋಚನೆಯಿಲ್ಲ" ಎಂದು ಹೇಳಿದ್ದಾರೆ. ಅಲ್ಲದೆ, ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಅದು ಬಹಳ ಹಿಂದಿನದು. ಹಾಗೆಯೇ ನನ್ನ ಹೆಸರಿನ ಆ ಟ್ವಿಟ್ಟರ್ ಖಾತೆ ಸಹ ನಕಲಿ" ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸಂಜೆ ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ನೇತೃತ್ವದಲ್ಲಿ ಸಪ್ನಾ ಚೌಧರಿ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವರದಿಯಾಗಿತ್ತು. ಅಲ್ಲದೆ, ಸಪ್ನಾ ಚೌಧರಿ ಕಾಂಗ್ರೆಸ್ನಿಂದ ಲೋಕಸಭೆ ಕಣದಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದ್ದು, ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು. ಆದರೆ ಶನಿವಾರ ತಡರಾತ್ರಿ ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಥುರಾ ಕ್ಷೇತ್ರದಿಂದ ಮಹೇಶ್ ಪಾಠಕ್ ಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಹೇಮಮಾಲಿನಿ ಸ್ಪರ್ಧಿಸುತ್ತಿದ್ದಾರೆ.