ಆರೋಗ್ಯಯುತ ದೇಹ ನಿಮ್ಮದಾಗಬೇಕೆ? ಹಾಗಿದ್ದರೆ ಮಾಡಿ ಈ ಕೆಲಸ!
ದೈಹಿಕ ಚಟುವಟಿಕೆ ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ.
ದೈಹಿಕ ನಿಷ್ಕ್ರಿಯತೆ ಅನಾರೋಗ್ಯಕ್ಕೆ ಪ್ರಮುಖ ಕಾರಣ ಎಂಬುದು ಗೊತ್ತಿರುವ ಸಂಗತಿ. ಏನನ್ನೂ ಮಾಡದೇ ಇರುವುದಕ್ಕಿಂತ ಯಾವುದೋ ಒಂದು ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಉತ್ತಮ. ಜನರು ವಾರಕ್ಕೆ ಕನಿಷ್ಠ 150 ನಿಮಿಷಗಳಾದರೂ ವ್ಯಾಯಾಮ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಕೆಲವರಿಗೆ ಇದು ಅಗಾಧವಾಗಿ ತೋರುತ್ತದೆ ಎಂದು ಸಂಶೋಧಕರು ವಾದಿಸುತ್ತಾರೆ.
ದಿ ಲಾನ್ಸೆಟ್ನಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ 10 ರಲ್ಲಿ 4 ಮಂದಿ ಸಮರ್ಪಕವಾಗಿ ಸಕ್ರಿಯರಾಗಿದ್ದಾರೆ. 52% ಭಾರತೀಯರು ದೈಹಿಕವಾಗಿ ನಿಷ್ಕ್ರಿಯರಾಗಿದ್ದಾರೆ ಎಂದು ಕೆಲವು ಅಧ್ಯಯನಗಳು ಹೇಳಿದೆ. ಧೂಮಪಾನ, ಮಧುಮೇಹ ಮತ್ತು ಹೃದಯ ಕಾಯಿಲೆಗಳಿಗಿಂತ ಜಡ ಜೀವನಶೈಲಿ ಬಹಳ ಅಪಾಯಕಾರಿ ಎಂದು ಮತ್ತೊಂದು ಅಧ್ಯಯನ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಡಾ. ಕೆ. ಕೆ. ಅಗರ್ವಾಲ್, ವ್ಯಾಯಾಮದ ಕೊರತೆ ಮಾನವನ ದೇಹವನ್ನು ಜಡವಾಗಿಸುತ್ತದೆ. ಆಧುನಿಕ ಮತ್ತು ಮುಂದುವರಿದ ತಂತ್ರಜ್ಞಾನ ಖಂಡಿತ ನಮಗೆ ಸುಲಭ ಮತ್ತು ಅನುಕೂಲಕರ. ಇವೆಲ್ಲವೂ ನಾವು ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸಗಳು. ತಂತ್ರಜ್ಞಾನದಿಂದ ಅನುಕೂಲವಾಗುತ್ತಿರುವುದರಲ್ಲಿ ಸಂಶಯವಿಲ್ಲ. ಆದರೆ, ಯಾವ ತಂತ್ರಜ್ಞಾನ ನಿಜವಾಗಿಯೂ ನಮ್ಮ ಜೀವನವನ್ನು ಉತ್ತಮಗೊಳಿಸಿದೆ? ಅದು ನಮ್ಮ ಜೀವನಶೈಲಿಯನ್ನು ಸುಲಭಗೊಳಿಸಿದೆ. ಆದರೆ ಅದೇ ವೇಳೆ ಅದರಿಂದ ನಮ್ಮ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ತೂಕ ಹೆಚ್ಚಳ, ಮಂಡಿ ನೋವು, ಹೃದಯ ಸಂಬಂದಿತ ಕಾಯಿಲೆ ಈ ರೀತಿ ಹಲವು ತೊಂದರೆಗಳು ಹೆಚ್ಚಾಗುವಂತೆ ಮಾಡಿದೆ ಎಂದಿದ್ದಾರೆ.
ದೀರ್ಘಕಾಲದವರೆಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು, ಸ್ಮಾರ್ಟ್ ಫೋನ್ ಬಳಕೆ, ಟಿವಿ ನೋಡುವುದು ಈ ಎಲ್ಲಾ ಚಟುವಟಿಕೆಗಳು ದೇಹದಲ್ಲಿ ಜಡ ವರ್ತನೆಯನ್ನು ಹೆಚ್ಚಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.
ವ್ಯಾಯಾಮವು ದೈಹಿಕ ಚಟುವಟಿಕೆಗೆ ಸಮಾನಾರ್ಥಕವಲ್ಲ. ವ್ಯಾಯಾಮವನ್ನು ಯೋಜಿಸುವುದರ ಮೂಲಕ ಮಾಡಲಾಗುತ್ತದೆ. ಆದರೆ ಇತರ ಚಟುವಟಿಕೆಗಳು ಎಂದರೆ, ಎಲ್ಲಾದರೂ ತೆರಳಬೇಕಾದರೆ ನಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳುವುದು. ಮಾರುಕಟ್ಟೆಯಿಂದ ದಿನಸಿ ತರುವ ವೇಳೆ ವಾಹನದ ಮೊರೆ ಹೋಗದೆ ದಿನಸಿಯನ್ನು ಕೈಯಲ್ಲೇ ಹೊತ್ತು ತರುವುದು. ಸಾಧ್ಯವಾದಷ್ಟು ನಮ್ಮ ಕೆಲಸವನ್ನು ನಾವೇ ಮಾಡುವುದು ಈ ರೀತಿಯ ದೈನಂದಿನ ಚಟುವಟಿಕೆಗಳು ಆರೋಗ್ಯಯುತ ದೇಹ ಪಡೆಯಲು ಸಹಾಯವಾಗುತ್ತದೆ.
ದೈಹಿಕ ಚಟುವಟಿಕೆಗೆ ವೈದ್ಯರ ಕೆಲವು ಸಲಹೆಗಳು:
- ಮೆಟ್ಟಿಲು ಹತ್ತಲು/ಇಳಿಯಲು ಲಿಫ್ಟ್ ಬಳಸಬೇಡಿ.
- ನೀವು ಹೆಚ್ಚು ಸಮಯ ಕುಳಿತೇ ಕೆಲಸ ಮಾಡಬೇಕಿದ್ದರೆ ಗಂಟೆಗೊಮ್ಮೆಯಾದರೂ ಒಂದೆರಡು ನಿಮಿಷ ಓಡಾಡಿ ಬನ್ನಿ.
- ಸಮೀಪದಲ್ಲಿರುವ ಅಂಗಡಿಗೆ/ಮಾರುಕಟ್ಟೆಗೆ ತೆರಳಬೇಕಾದರೆ ನಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳಿ.
- ಮಧ್ಯಾಹ್ನ ಮತ್ತು ರಾತ್ರಿ ಭೋಜನದ ಬಳಿಕ ಸ್ವಲ್ಪ ಓಡಾಡುವ ಅಭ್ಯಾಸ ಮೈಗೂಡಿಸಿಕೊಳ್ಳಿ.
- ದಿನಕ್ಕೆ ಕನಿಷ್ಠ 30 ನಿಮಿಷವಾದರು ವ್ಯಾಯಾಮ ಮಾಡಿದರೆ ಆರೋಗ್ಯಯುತ ದೇಹ ನಿಮ್ಮದಾಗಿಸಿಕೊಳ್ಳಬಹದು.