ಬಿಜೆಪಿಗೆ ಟಾಂಗ್ ಕೊಡಲು ಸಜ್ಜಾಗುತ್ತಿದೆ ಪ್ರತಿಪಕ್ಷಗಳ ಮೈತ್ರಿಕೂಟ
ನವದೆಹಲಿ: ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಮೂರು ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಪ್ರಾದೇಶಿಕ ಪಕ್ಷಗಳು,ಈಗ 2019 ಕ್ಕೆ ಮಹಾಮೈತ್ರಿ ಮೂಲಕ ಬಿಜೆಪಿಯನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ರಣತಂತ್ರ ರೂಪಿಸುತ್ತಿವೆ.
2019 ರಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಅದರ ಭಾಗವಾಗಿ ಈಗ ರಾಹುಲ್ ಗಾಂಧಿ ಸಮಾನ ಮನಸ್ಕ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸೃಷ್ಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ
ಈಗಾಗಲೇ ಎನ್ಸಿಪಿ ನಾಯಕ ಶರದ್ ಪವಾರ್ ಮನೆಯಲ್ಲಿ ಈ ಕುರಿತಾಗಿ ಮಾತುಕತೆ ನಡೆಸಿರುವ ರಾಹುಲ್ ಗಾಂಧಿ,ಮಾರ್ಚ್ 28 ರಂದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯು ಭಾರಿ ಮುಖಭಂಗ ಅನುಭವಿಸಿರುವ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಾದೇಶಿಕ ಪಕ್ಷಗಳು ಮುಂಬರುವ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಯವಾಗಿ ಸೋಲಿಸಲು ಯೋಜನೆ ರೂಪಿಸುತ್ತಿವೆ ಎನ್ನಲಾಗಿದೆ.