ಅಯೋಧ್ಯೆ ವಿಮಾನ ನಿಲ್ದಾಣ ಪ್ರಸ್ತಾಪಕ್ಕೆ ಯೋಗಿ ಸಚಿವ ಸಂಪುಟ ಅಸ್ತು
ಅಯೋಧ್ಯೆ ವಿವಾದ ಮುನ್ನೆಲೆಗೆ ಬಂದಿರುವ ಈ ಸಂದರ್ಭದಲ್ಲಿ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದು ಹೆಚ್ಚಿನ ಮಹತ್ವ ಪಡೆದಿದೆ.
ಲಕ್ನೋ: ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಚಿವ ಸಂಪುಟ 11 ಪ್ರಮುಖ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಅನುಮೋದನೆ ದೊರೆತಿದ್ದು, ಅಯೋಧ್ಯಾ ವಿಮಾನ ನಿಲ್ದಾಣ ನಿರ್ಮಾಣಕ್ಕೆ 200 ಕೋಟಿ ರೂ. ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ. ಅಯೋಧ್ಯೆ ವಿವಾದ ಮುನ್ನೆಲೆಗೆ ಬಂದಿರುವ ಈ ಸಂದರ್ಭದಲ್ಲಿ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದು ಹೆಚ್ಚಿನ ಮಹತ್ವ ಪಡೆದಿದೆ.
ಕ್ಯಾಬಿನೆಟ್ ಸಭೆಯಲ್ಲಿ, ಯುಪಿಯಲ್ಲಿನ ಜಮೀನು ಸಂಗ್ರಹಣಾ ನೀತಿ ಸಂಬಂಧ ವಸತಿ ಅಭಿವೃದ್ಧಿ ಕೌನ್ಸಿಲ್ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪಾಲಿಸಿಯಲ್ಲಿ ಬದಲಾವಣೆ ತಂದು ನಿರ್ಮಾಣ ವಲಯವನ್ನು ಉತ್ತೇಜಿಸಲು ಯಾವುದೇ ಅಭಿವೃದ್ಧಿ ಶುಲ್ಕವಿಲ್ಲದೆ, ಒಟ್ಟು ಭೂಮಿಯಲ್ಲಿ 25% ಭೂಮಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.
ಇದಲ್ಲದೆ, ಬುಂಡೇಲ್ಖಂಡ್ ಮತ್ತು ವಿಂಧ್ಯಾಚಲ್ನ ಒಂಬತ್ತು ಜಿಲ್ಲೆಗಳಲ್ಲಿ 15 ಸಾವಿರ 722 ಕೋಟಿ ರೂ. ಕುಡಿಯುವ ನೀರಿನ ಯೋಜನೆಗಳ ಪ್ರಸ್ತಾಪಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಗೋರಾಕ್ಪುರದ ಆಹಾರ ಕಾರ್ಖಾನೆಯ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾಪ ಸೇರಿದಂತೆ ಇನ್ನು ಹಲವು ಪ್ರಸ್ತಾಪಗಳಿಗೆ ಅನುಮೋದನೆ ನೀಡಲಾಗಿದೆ.