ಬಿಎಸ್ಎನ್ಎಲ್ ನೂತನ ಪ್ಲಾನ್! ಈ ಸಿಬ್ಬಂದಿಗೆ ಮಾತ್ರ ದೊರೆಯಲಿದೆ ವಿಶೇಷ ಸೌಲಭ್ಯ
ಬಿಎಸ್ಎನ್ಎಲ್ ಪ್ಲಾನ್ ಅಡಿಯಲ್ಲಿ 144 ರೂ.ಗಳಿಗೆ 30 ದಿನಗಳವರೆಗೆ ಅನಿಯಮಿತ ಕರೆಗಳು, ಪ್ರತಿನಿತ್ಯ 100 ಎಸ್ಎಂಎಸ್, 2 ಜಿಬಿ ಡೇಟಾ, ಉಚಿತ ರೋಮಿಂಗ್ ಸೌಲಭ್ಯ ದೊರೆಯಲಿದೆ.
ಬೆಂಗಳೂರು: ಪತಂಜಲಿ ಸಮೂಹ ಸದಸ್ಯರಿಗಾಗಿಯೇ ಬಿಎಸ್ಎನ್ಎಲ್ ಕರ್ನಾಟಕದಲ್ಲಿ 'ಪತಂಜಲಿ ಬಿಎಸ್ಎನ್ಎಲ್ ಪ್ಲಾನ್' ಘೋಷಿಸಿದೆ. ಇದು ಪ್ರೀಪೆಯ್ಡ್ ಪ್ಲಾನ್ ಆಗಿದ್ದು, ಪತಂಜಲಿ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಈ ಪ್ಲಾನ್ ಸೌಲಭ್ಯ ಪಡೆಯಬಹುದು.
ಪತಂಜಲಿ ಬಿಎಸ್ಎನ್ಎಲ್ ಪ್ಲಾನ್ ಅಡಿಯಲ್ಲಿ 144 ರೂ.ಗಳಿಗೆ 30 ದಿನಗಳವರೆಗೆ ಅನಿಯಮಿತ ಕರೆಗಳು, ಪ್ರತಿನಿತ್ಯ 100 ಎಸ್ಎಂಎಸ್, 2 ಜಿಬಿ ಡೇಟಾ, ಉಚಿತ ರೋಮಿಂಗ್ ಸೌಲಭ್ಯ ದೊರೆಯಲಿದೆ. ಅಲ್ಲದೆ, 792 ರೂ.ಗಳಿಗೆ 180 ದಿನಗಳು ಮತ್ತು 1,584 ರೂ.ಗಳಿಗೆ 365 ದಿನಗಳವರೆಗೆ ಅನಿಯಮಿತ ಕರೆಗಳು, ಪ್ರತಿನಿತ್ಯ 100 ಎಸ್ಎಂಎಸ್, 2 ಜಿಬಿ ಡೇಟಾ, ಉಚಿತ ರೋಮಿಂಗ್ ಸೌಲಭ್ಯ ದೊರೆಯಲಿದೆ.
ಕಳೆದ ತಿಂಗಳಷ್ಟೇ ಬಿಎಸ್ಎನ್ಎಲ್ ಮತ್ತು ಪತಂಜಲಿ ಸಂಸ್ಥೆ ಜಂಟಿಯಾಗಿ 'ಸ್ವದೇಶಿ ಸಮೃದ್ಧಿ' ಸಿಮ್ ಕಾರ್ಡ್ಗಳನ್ನು ಸಂಸ್ಥೆ ಸದಸ್ಯರಿಗಾಗಿ ಬಿಡುಗಡೆ ಮಾಡಿತ್ತು. ಪತಂಜಲಿ ಸಮೂಹದಡಿ ರಾಜ್ಯದಲ್ಲಿ 27,000ಕ್ಕೂ ಹೆಚ್ಚು ಮಳಿಗೆ, ಕೇಂದ್ರಗಳಿದ್ದು, ಸಂಸ್ಥೆಯ ಸದಸ್ಯತ್ವ ಗುರುತಿನ ಚೀಟಿ ಆಧರಿಸಿ ಒಬ್ಬರಿಗೆ ಒಂದು ಸಿಮ್ ನೀಡಲಾಗುತ್ತದೆ. ಸದಸ್ಯರು ಈಗಾಗಲೇ ಬಳಸುತ್ತಿರುವ ಮೊಬೈಲ್ ಸಂಖ್ಯೆಯನ್ನೇ ಬಿಎಸ್‌ಎನ್‌ಎಲ್‌ನ ಹೊಸ ಪ್ಲಾನ್‌ಗೆ ಪೋರ್ಟ್ ಮಾಡಿಕೊಳ್ಳಲು ಅವಕಾಶವಿದೆ. ಸದ್ಯ ಮಾರುಕಟ್ಟೆಯಲ್ಲಿ ಅತಿ ಮಿತವ್ಯಯದ ಪ್ಲಾನ್ ಇದಾಗಿದೆ.
ಪತಂಜಲಿ ಸಂಸ್ಥೆಯ ಭಾರತ್ ಸ್ವಾಭಿಮಾನ್ ನ್ಯಾಸ್ (ಟ್ರಸ್ಟ್) ಸದಸ್ಯರು, ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ, ಯುವ ಭಾರತ್, ಪತಂಜಲಿ ಕಿಸಾನ್ ಸೇವಾ ಸದಸ್ಯರು, ಸ್ವದೇಶಿ ಸಮೃದ್ಧಿ ಕಾರ್ಡ್ ಹೊಂದಿರುವವರು ಈ ಪ್ಲಾನ್ ಲಾಭ ಪಡೆಯಬಹುದು.