ನಾಳೆ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ: ಅನ್ಲಾಕ್ 3 ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ
ಲಾಕ್ಡೌನ್ (Lockdown) ಹೇರುವ ಹಾಗೂ ಅನ್ ಲಾಕ್ ಜಾರಿಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದರು.
ನವದೆಹಲಿ: ಎರಡನೇ ಹಂತದ ಅನ್ಲಾಕ್ ಮುಕ್ತಾಯವಾಗಲು ಮೂರು ದಿನ ಮಾತ್ರ ಬಾಕಿ ಇದೆ. COVID -19 ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಈ ನಡುವೆ ನಾಳೆ ಕೇಂದ್ರ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಕುತೂಹಲ ಮನೆಮಾಡಿದೆ.
ನಾಳೆ ಬೆಳಿಗ್ಗೆ 10.30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು ಸಭೆಯಲ್ಲಿ ಮುಖ್ಯವಾಗಿ ಮೂರನೇ ಹಂತದ ಅನ್‌ಲಾಕ್ (Unlock) ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಲಾಕ್‌ಡೌನ್ (Lockdown) ಹೇರುವ ಹಾಗೂ ಅನ್ ಲಾಕ್ ಜಾರಿಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಅದೇ ರೀತಿ ಈಗಲೂ ಮೂರನೇ ಹಂತದ ಲಾಕ್ಡೌನ್ ಜಾರಿಗೊಳಿಸುವ ಮುನ್ನ ಮತ್ತೊಮ್ಮೆ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಾರೆ ಅಥವಾ ದೂರವಾಣಿ ಮೂಲಕ ಸಮಾಲೋಚನೆ ನಡೆಸುತ್ತಾರೆ. ರಾಜ್ಯಗಳ ಪರಿಸ್ಥಿತಿ ಅವಲೋಕನ ಮಾಡುತ್ತಾರೆ. ರಾಜ್ಯಗಳಿಂದ ಸಲಹೆ ಶಿಫಾರಸು ಕೇಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಎರಡನೇ ಹಂತದ ಅನ್ಲಾಕ್ ಮುಕ್ತಾಯವಾಗಲು ಮೂರು ದಿನ ಮಾತ್ರ ಬಾಕಿ ಇದ್ದು ಈವರೆಗೆ ಅಂಥ ಬೆಳವಣಿಗಳು ಕಂಡುಬಂದಿಲ್ಲ.
ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಮನೆಯಿಂದ ಹೊರಬಂದರೆ ಬೀಳುತ್ತೆ ಭಾರೀ ದಂಡ
ಈ ಬಾರಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸದೆಯೂ ನಿರ್ಧರಿಸಬಹುದು ಎಂಬ ಇನ್ನೊಂದು ರೀತಿಯ ಮಾಹಿತಿ ಕೂಡ ಕೇಳಿಬರುತ್ತಿದೆ. ಅದಕ್ಕೆ ಪೂರಕವಾಗಿ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಅನ್ಲಾಕ್ 3ರ ವೇಳೆ ಶಾಲಾ-ಕಾಲೇಜುಗಳು, ಸಿನಿಮಾ ಥಿಯೇಟರುಗಳ ಆರಂಭಕ್ಕೆ ಅವಕಾಶ ನೀಡುತ್ತಾರಾ ಇಲ್ಲವೋ ಎಂಬ ಕುತೂಹಲ ಮನೆ ಮಾಡಿದೆ. ಅದೇ ರೀತಿ ಹಂತಹಂತವಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಹೆಚ್ಚಿಸುತ್ತಾರೆ. ರೈಲು ಸಂಚಾರವನ್ನು ಹೆಚ್ಚು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ COVID-19 ಸೋಂಕು ಹರಡುವಿಕೆ ಮಹಾ ನಗರಗಳಲ್ಲೇ ಹೆಚ್ಚಿರುವುದರಿಂದ ಮೆಟ್ರೋ ಸಂಚಾರ ಆರಂಭಿಸುವುದು ಅನುಮಾನಸ್ಪದವಾಗಿದೆ.
ಮೋದಿ ಸರ್ಕಾರದ ದೊಡ್ಡ ಗಿಫ್ಟ್: ನಿವೃತ್ತಿ ಹೊಂದುವ ನೌಕರರ ಚಿಂತೆಯಾಗಲಿದೆ ದೂರ
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ ದೇಶದಲ್ಲಿ ಜುಲೈ 27ರಂದು 47,704 COVID-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ದೇಶದ COVID-19 ಪೀಡಿತರ ಸಂಖ್ಯೆ 14,83,157ಕ್ಕೆ ಏರಿಕೆಯಾಗಿದೆ. ಜುಲೈ 27ರಂದು COVID-19ಗೆ 654 ಮಂದಿ ತುತ್ತಾಗಿದ್ದು, COVID-19ಗೆ ಮೃತಪಟ್ಟವರ 33,425ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇನ್ನೂ 4,96,988 ಪ್ರಕರಣಗಳು ಸಕ್ರೀಯವಾಗಿವೆ. 9,52,744 ಜನ COVID-19ನಿಂದ ಗುಣಮುಖರಾಗಿದ್ದಾರೆ.