ನವದೆಹಲಿ: ಮಹಾರಾಷ್ಟ್ರ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ರಾಜ್ಯದಲ್ಲಿ ಇತ್ತೀಚೆಗೆ ರೂಪುಗೊಂಡ ಸರ್ಕಾರವು ರೈತರ ಸಾಲವನ್ನು ಎರಡು ಲಕ್ಷ ರೂಪಾಯಿಗಳವರೆಗೆ ಮನ್ನಾ ಮಾಡುವುದಾಗಿ ಘೋಷಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯ ವಿಧಾನಸಭೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದರು. ರೈತರ ಸಾಲ ಮನ್ನಾ ಹಣವನ್ನು ನೇರವಾಗಿ ಬ್ಯಾಂಕ್‌ಗಳಲ್ಲಿ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದರು. ಸರ್ಕಾರದ ಪ್ರಕಾರ, 2020 ರ ಮಾರ್ಚ್‌ನಿಂದ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ.
 
ವಿಶೇಷವೆಂದರೆ, ಶಿವಸೇನೆ ಇತ್ತೀಚೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಪರಿಹಾರ ನೀಡಲು ಕೆಲಸ ಮಾಡುವುದಾಗಿ ಶಿವಸೇನೆ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಭರವಸೆ ನೀಡಿತ್ತು. ರೈತರಿಗೆ ಸಾಲ ಮನ್ನಾ ಮಾಡುವ ವಿಷಯ ಆಗಾಗ್ಗೆ ಉದ್ಭವಿಸುತ್ತಿದೆ. ರೈತರಿಗಾಗಿ ಘೋಷಿಸಿರುವ ಈ ಸಾಲ ಮನ್ನಾ ಯೋಜನೆಯನ್ನು ಮಹಾತ್ಮ ಜ್ಯೋತಿರಾವ್ ಫುಲೆ ಸಾಲ ಮನ್ನಾ ಯೋಜನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿವರಿಸಿದ್ದಾರೆ. ಶಿವಸೇನೆ ಮುಖ್ಯಸ್ಥರು ವಿಧಾನಸಭೆಯಲ್ಲಿ, “ನಮ್ಮ ಸರ್ಕಾರವು 30 ಸೆಪ್ಟೆಂಬರ್ 2019 ರೊಳಗೆ ಬಾಕಿ ಇರುವ ಕೃಷಿ ಸಾಲವನ್ನು  ಮನ್ನಾ ಮಾಡಲಿದೆ. ಗರಿಷ್ಠ ಎರಡು ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತದೆ" ಎಂದರು
 
ಪ್ರತಿಪಕ್ಷಗಳ ಪ್ರತಿಭಟನೆ:
ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ವಿರೋಧಿಸಿದರು. ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ ಇದೀಗ ಎರಡು ಲಕ್ಷ ರೂಪಾಯಿಗಳವರೆಗೆ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿರುವುದು ಸರಿಯಲ್ಲ. ರೈತರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿ, ರಾಜ್ಯ ಸರ್ಕಾರದಿಂದ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷ ನಾಯಕರು ಒತ್ತಾಯಿಸಿದರು. ಫಡ್ನವೀಸ್ ನೇತೃತ್ವದ ಬಿಜೆಪಿ ಶಾಸಕರು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸದನದಿಂದ ಹೊರ ನಡೆದರು.


COMMERCIAL BREAK
SCROLL TO CONTINUE READING

ರೈತರಿಗೆ ಪರಿಹಾರ:
ಮಹಾರಾಷ್ಟ್ರದಲ್ಲಿ, ಕಳೆದ ಕೆಲವು ವರ್ಷಗಳಿಂದ ಪ್ರತಿಕೂಲ ಹವಾಮಾನ ಮತ್ತು ಬರಗಾಲದಿಂದಾಗಿ, ರೈತರ ಬೆಳೆಗಳು ಹಾಳಾಗುತ್ತಿವೆ. ಇದರಿಂದಾಗಿ ರೈತರ ಮೇಲಿನ ಸಾಲದ ಹೊರೆ ಗಣನೀಯವಾಗಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಸಾಲಮನ್ನಾ ಘೋಷಣೆಯು ರೈತರಿಗೆ ಹೆಚ್ಚಿನ ಸಮಾಧಾನವನ್ನು ತರಲಿದೆ ಎಂದು ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿತ್ಯ ವರದಿಯಾಗುತ್ತಲೇ ಇದೆ. 2015 ಮತ್ತು 2018 ರ ನಡುವೆ ಮಹಾರಾಷ್ಟ್ರದಲ್ಲಿ 12,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಾಹಿತಿಯನ್ನು ಜೂನ್‌ನಲ್ಲಿ ರಾಜ್ಯ ವಿಧಾನಸಭೆಗೆ ನೀಡಲಾಯಿತು. ಅದೇ ಸಮಯದಲ್ಲಿ, ರಾಜ್ಯ ಸರ್ಕಾರ ಒದಗಿಸಿದ ಮಾಹಿತಿಯ ಪ್ರಕಾರ, ಈ ವರ್ಷ ಜನವರಿ ಮತ್ತು ಮಾರ್ಚ್ ನಡುವೆ 610 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 192 ರೈತರು ಸಾಲದ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.