ಸ್ಕೂಲ್ ತೆರೆಯುವ ಮುನ್ನ ಶುಲ್ಕ ವಿಧಿಸದಂತೆ ಸರ್ಕಾರದ ಸೂಚನೆ, ಆನ್‌ಲೈನ್ ಕ್ಲಾಸ್ ಮುಚ್ಚಿದ ಶಾಲೆಗಳು
ಶಾಲೆಗಳು ಮತ್ತೆ ತೆರೆಯುವವರೆಗೆ ವಿದ್ಯಾರ್ಥಿಗಳಿಂದ ಶುಲ್ಕ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರದ ಆದೇಶದ ನಂತರ ಕೋಪಗೊಂಡ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿವೆ.
ಅಹಮದಾಬಾದ್: ಗುಜರಾತ್‌ನ ಅನೇಕ ಖಾಸಗಿ ಶಾಲೆಗಳು ಗುರುವಾರದಿಂದ ಆನ್‌ಲೈನ್ ತರಗತಿಗಳನ್ನು ಅನಿರ್ದಿಷ್ಟವಾಗಿ ನಿಲ್ಲಿಸಿವೆ. ಶಾಲೆಗಳು ಮತ್ತೆ ತೆರೆಯುವವರೆಗೆ ವಿದ್ಯಾರ್ಥಿಗಳಿಂದ ಶುಲ್ಕ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರದ ಆದೇಶದ ನಂತರ ಕೋಪಗೊಂಡ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿವೆ. ಕಳೆದ ವಾರ ಹೊರಡಿಸಿದ ಅಧಿಸೂಚನೆಯಲ್ಲಿ ಕೋವಿಡ್ -19 (Covid 19) ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ಮತ್ತೆ ಶಾಲೆಗಳು ತೆರೆಯುವ ಮೊದಲು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ (School Fees) ವಿಧಿಸದಂತೆ ಗುಜರಾತ್ ಸರ್ಕಾರ ಸ್ವ-ಹಣಕಾಸು ಶಾಲೆಗಳಿಗೆ ಸೂಚನೆ ನೀಡಿತ್ತು. ಇದಲ್ಲದೆ 2020-21ರ ಶೈಕ್ಷಣಿಕ ಅಧಿವೇಶನದಲ್ಲಿ ಶಾಲೆಗಳು ಶುಲ್ಕವನ್ನು ಹೆಚ್ಚಿಸುವುದನ್ನು ನಿಷೇಧಿಸಲಾಗಿದೆ.
ಗುಜರಾತ್‌ನಲ್ಲಿ ರಾಜ್ಯ ಸರ್ಕಾರದ ಈ ಕ್ರಮದಿಂದ ಅಸಮಾಧಾನಗೊಂಡ ಸುಮಾರು 15 ಸಾವಿರ ಖಾಸಗಿ ಶಾಲೆಗಳನ್ನು ಪ್ರತಿನಿಧಿಸುವ ಒಕ್ಕೂಟವು ಆನ್‌ಲೈನ್ ತರಗತಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ರಾಜ್ಯದ ಬಹುತೇಕ ಎಲ್ಲಾ ಸ್ವ-ಹಣಕಾಸು (ಖಾಸಗಿ) ಶಾಲೆಗಳು ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ನಿರಾಕರಿಸುತ್ತಿವೆ ಎಂದು ಖಾಸಗಿ ಶಾಲಾ ನಿರ್ವಹಣಾ ಸಂಘದ ವಕ್ತಾರ ದೀಪಕ್ ರಾಜ್ಯಗುರು ಗುರುವಾರ ಹೇಳಿದ್ದಾರೆ.
ಶಾಲೆ ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುವಂತಿಲ್ಲ: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
"ಆನ್‌ಲೈನ್ ಶಿಕ್ಷಣವು ನಿಜವಾದ ಶಿಕ್ಷಣವಲ್ಲ ಎಂದು ಸರ್ಕಾರ ನಂಬಿದರೆ, ನಮ್ಮ ವಿದ್ಯಾರ್ಥಿಗಳಿಗೆ ಅಂತಹ ಶಿಕ್ಷಣವನ್ನು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರ ಈ ಆದೇಶವನ್ನು ಹಿಂತೆಗೆದುಕೊಳ್ಳುವವರೆಗೂ ಆನ್‌ಲೈನ್ ಶಿಕ್ಷಣವನ್ನು ಸ್ಥಗಿತಗೊಳಿಸಲಾಗುತ್ತದೆ" ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನ ಮೊರೆಹೋಗಲಾಗುವುದು ಎಂದವರು ತಿಳಿಸಿದ್ದಾರೆ.
ಗುಜರಾತ್ ಸರ್ಕಾರದ ಆದೇಶ:
ಕೋವಿಡ್ -19 ಕಾರಣದಿಂದಾಗಿ ಶಾಲೆಗಳು ಪುನರಾರಂಭಗೊಳ್ಳುವ ಮೊದಲು ಯಾವುದೇ ವಿದ್ಯಾರ್ಥಿಗಳಿಂದ ಬ್ಹೊಧನಾ ಶುಲ್ಕ ತೆಗೆದುಕೊಳ್ಳದಂತೆ ಗುಜರಾತ್ ಸರ್ಕಾರ ರಾಜ್ಯದ ಸ್ವ-ಹಣಕಾಸು ಶಾಲೆಗಳಿಗೆ ಸೂಚನೆ ನೀಡಿದೆ. ಇದಲ್ಲದೆ 2020-21ರ ಶೈಕ್ಷಣಿಕ ಅಧಿವೇಶನಕ್ಕೆ ಶುಲ್ಕವನ್ನು ಹೆಚ್ಚಿಸದಂತೆ ಸರ್ಕಾರ ಶಾಲೆಗಳಿಗೆ ನಿರ್ದೇಶನ ನೀಡಿತು.
ಇಲಾಖೆಯ ಪ್ರಕಾರ ಗುಜರಾತ್ ಸ್ವ-ಹಣಕಾಸು ಶಾಲೆಗಳ (ಶುಲ್ಕ ನಿಯಂತ್ರಣ) ಕಾಯ್ದೆ 2017 ರ ಅಡಿಯಲ್ಲಿ ಲಾಕ್‌ಡೌನ್ (Lockdown) ಸಮಯದಲ್ಲಿ ಈ ಶಾಲೆಗಳು ತಮ್ಮ ಸಿಬ್ಬಂದಿ ವೇತನಕ್ಕಾಗಿ ಭರಿಸಿದ ವೆಚ್ಚವನ್ನು ರಾಜ್ಯದ ಶುಲ್ಕ ನಿಯಂತ್ರಕ ಸಮಿತಿ ಪರಿಗಣಿಸುತ್ತದೆ. ಪೋಷಕರು ಮಾಡುವ ಶುಲ್ಕದ ಮುಂಗಡ ಪಾವತಿಯನ್ನು ಮುಂದಿನ ಶುಲ್ಕದಲ್ಲಿ ಶಾಲೆಯು ಸರಿಹೊಂದಿಸಬೇಕಾಗುತ್ತದೆ ಎಂದು ಅದು ಹೇಳಿದೆ.