ಐತಿಹಾಸಿಕವಾಗಿ, ಕಾಶ್ಮೀರದಲ್ಲಿ ಭಾರತದ ಅಧಿಕಾರವನ್ನು ಪ್ರಶ್ನಿಸಿದ ವ್ಯಕ್ತಿಗಳನ್ನು ಭಾರತ ಗುರಿಯಾಗಿಸಿದೆ ಎಂದು ಪಾಕಿಸ್ತಾನ ಆರೋಪಿಸುತ್ತಾ ಬಂದಿದೆ. ಆದರೆ ಪಾಕಿಸ್ತಾನದ ಆರೋಪಗಳಿಗೆ ಅಂತಾರಾಷ್ಟ್ರೀಯ ಸಮುದಾಯ ಹೆಚ್ವಿನ ಮಹತ್ವ ಕೊಡುತ್ತಿರಲಿಲ್ಲ.


COMMERCIAL BREAK
SCROLL TO CONTINUE READING

ಆದರೆ, ಸಿಖ್ ಪ್ರತ್ಯೇಕತಾವಾದಿ, ಕೆನಡಾ ನಿವಾಸಿ, ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂದು ಕೆನಡಾ ಸರ್ಕಾರ ಆರೋಪಿಸಿದ್ದು, ಈ ಪ್ರಕರಣ ಜಾಗತಿಕವಾಗಿ ಆಸಕ್ತಿ ಮತ್ತು ಆತಂಕಗಳನ್ನು ಮೂಡಿಸಿದೆ. ಭಾರತದಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ನಡೆಸಿ, ಕಾನೂನು ಕ್ರಮ ಎದುರಿಸಬೇಕಿದ್ದ ನಿಜ್ಜರ್, ಈ ವರ್ಷ ಜೂನ್ ತಿಂಗಳಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಗುಂಡೇಟಿಗೆ ಬಲಿಯಾಗಿದ್ದ.


ಈ ಹತ್ಯೆಗೆ ಸಂಬಂಧಿಸಿದಂತೆ, ಭಾರತ ಮತ್ತು ಕೆನಡಾ ನಡುವಿನ ಅಸಮಾಧಾನ, ಭಿನ್ನಾಭಿಪ್ರಾಯಗಳ ನಡುವೆ ಪಾಕಿಸ್ತಾನವೂ ಮಧ್ಯ ಪ್ರವೇಶ ನಡೆಸಿದೆ! ಕೆನಡಾದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವೂ ತನ್ನದೇ ಆದ ದೃಷ್ಟಿಕೋನವನ್ನು ರೂಪಿಸಿದ್ದು, ನಿಜ್ಜರ್ ಹತ್ಯೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸುವ ಹಿಂದೂ ರಾಷ್ಟ್ರೀಯವಾದಗಳಿಗೆ ಸಂಬಂಧ ಕಲ್ಪಿಸಿದ್ದು, ಹಾಗೂ ಕೆನಡಾ ಘಟನೆಗೆ ಹೋಲಿಕೆಯಾಗುವ, ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳನ್ನು ಹೋಲಿಸಿದೆ. ನ್ಯೂಯಾರ್ಕ್‌‌ನ ಕೌನ್ಸಿಲ್ ಆಫ್ ಫಾರಿನ್ ರಿಲೇಶನ್ಸ್‌ನಲ್ಲಿ ಇತ್ತೀಚೆಗೆ ಮಾತನಾಡಿರುವ ಪಾಕಿಸ್ತಾನದ ಮಧ್ಯಂತರ ಪ್ರಧಾನಿ ಅನ್ವಾರ್ ಉಲ್ ಹಕ್ ಕಾಕರ್ ಅವರು, "ಈ ಹಿಂದುತ್ವದ ಪ್ರತಿಪಾದಕರು ಎಷ್ಟರಮಟ್ಟಿಗೆ ಆತ್ಮವಿಶ್ವಾಸ ಗಳಿಸುತ್ತಿದ್ದಾರೆಂದರೆ, ಅವರು ತಮ್ಮ ಪ್ರದೇಶಗಳನ್ನೂ ಮೀರಿ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದ್ದಾರೆ" ಎಂದು ಆರೋಪಿಸಿದ್ದರು.


ಈ ವಿಚಾರದ ಕುರಿತು ವಿವರಣೆ ನೀಡಿರುವ ಪಾಕಿಸ್ತಾನ, ಭಾರತ ನಿರ್ವಹಿಸುತ್ತಿರುವ 'ಅಂತಾರಾಷ್ಟ್ರೀಯ ಹತ್ಯೆಗಳ ಕಾಲ' ಈಗ ಜಾಗತಿಕ ಕಳವಳದ ವಿಚಾರವಾಗಿದೆ ಎಂದಿದೆ. ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸೈರಸ್ ಕಾಜಿ಼ ಅವರು ಎಲ್ಲ ರಾಷ್ಟ್ರಗಳು ತಮ್ಮ ಮಹತ್ತರ ಸಹಯೋಗಿ ಎಂದು ಪರಿಗಣಿಸುತ್ತಿರುವ ಭಾರತದ ಕ್ರಮಗಳನ್ನು ಗಮನಿಸಬೇಕು ಎಂದು ಕರೆ ನೀಡಿದ್ದಾರೆ.


ಇದನ್ನೂ ಓದಿ- ಭಾರತ, ಕೆನಡಾ ಮತ್ತು ಅಮೆರಿಕಾ: ರಾಜತಾಂತ್ರಿಕತೆ ಮತ್ತು ಆರೋಪಗಳ ಸಂಕೀರ್ಣ ಸಂಬಂಧ


ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಆರೋಪ ತನಗೆ ಆಶ್ಚರ್ಯ ತಂದಿಲ್ಲ ಎನ್ನುವಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ. ಯಾಕೆಂದರೆ, ಭಾರತ ತನ್ನ ಪ್ರದೇಶದಲ್ಲೂ ಇದೇ ರೀತಿ ವರ್ತಿಸುತ್ತದೆ ಎಂದು ಪಾಕಿಸ್ತಾನ ನಂಬಿದೆ.


ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆಯಾದ ಮುಮ್ತಾಜ್ ಜೆ಼ಹ್ರಾ ಬಲೂಚ್ ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪಾಕಿಸ್ತಾನ ದೀರ್ಘಕಾಲದಿಂದ, ನಿರಂತರವಾಗಿ ನಿರ್ದಿಷ್ಟ ಹತ್ಯೆಗಳು ಮತ್ತು ಬೇಹುಗಾರಿಕೆಯನ್ನು ಅನುಭವಿಸುತ್ತಾ ಬಂದಿದ್ದು, ಇದನ್ನು ಭಾರತದ ಗುಪ್ತಚರ ಸಂಸ್ಥೆಗಳು ಕೈಗೊಂಡಿವೆ ಎಂದಿದ್ದರು.


ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಕುರಿತು ನವದೆಹಲಿಯ ಯೋಚನೆ ಮತ್ತು ಯೋಜನೆಗಳಿಗೆ ಸವಾಲಾಗಿದ್ದಾರೆ ಎಂದು ಪರಿಗಣಿಸಲಾದವರನ್ನು ಭಾರತ ಹತ್ಯೆಗೈದಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನ 2021ರಲ್ಲಿ ಲಾಹೋರ್‌ನಲ್ಲಿ ನಡೆದ ದಾಳಿಯೊಂದರ ಹಿಂದೆ ಭಾರತದ ಪಾತ್ರವಿದೆ ಎನ್ನುವ ದಾಖಲೆಯನ್ನು ಸಾರ್ವಜನಿಕಗೊಳಿಸಿತ್ತು. ವರದಿಗಳ ಪ್ರಕಾರ, ಈಗ ಬಂಧನದಲ್ಲಿರುವ, ನಿಷೇಧಿತ ಜಮಾತ್ ಉದ್ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಫೀಜ಼್ ಮುಹಮ್ಮದ್ ಸಯೀದ್‌ನನ್ನು ಹತ್ಯೆಗೈಯುವ ಉದ್ದೇಶದಿಂದ ಭಾರತ ಈ ದಾಳಿಯನ್ನು ರೂಪಿಸಿತ್ತು ಎಂದು ಪಾಕಿಸ್ತಾನ ಆರೋಪಿಸಿದೆ.


ಈ ತಿಂಗಳ ಆರಂಭದಲ್ಲಿ ನಡೆದ ಘಟನೆಯೊಂದರಲ್ಲಿ, ಕಾಶ್ಮೀರದ ಉಗ್ರ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದ ಜಮಾತ್ ಉದ್ ದಾವಾದ ಮಾಜಿ ನಾಯಕನೊಬ್ಬನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿಟ್ಟು ಹತ್ಯೆಗೈಯಲಾಗಿತ್ತು.


ಈ ಹಿಂದಿನಿಂದಲೂ ಪಾಕಿಸ್ತಾನದಲ್ಲಿ ಭಾರತ ಇಂತಹ ಹತ್ಯೆಗಳನ್ನು ಪ್ರಾಯೋಜಿಸುತ್ತಾ ಬಂದಿದೆ ಎಂದು ತಾನು ನಡೆಸಿರುವ ಆರೋಪಗಳಿಗೆ ಅಂತಾರಾಷ್ಟ್ರೀಯ ಸಮುದಾಯ ಕಿವಿಗೊಡಲಿಲ್ಲ ಎಂಬ ಹತಾಶೆ, ಇನ್ನು ಮುಂದೆಯೂ ಇಂತಹ ಹತ್ಯೆಗಳು ಪಾಕಿಸ್ತಾನದಲ್ಲಿ ನಡೆಯಬಹುದು ಎಂಬ ಆತಂಕದ ಕಾರಣದಿಂದ ಪಾಕಿಸ್ತಾನ ಈ ರೀತಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ. ಈಗ ಕೆನಡಾ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತನ್ನ ಕಳವಳಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತರಲು ಸೂಕ್ತ ಸಂದರ್ಭ ಎಂದು ಪಾಕಿಸ್ತಾನ ಭಾವಿಸಿದೆ. ಕೆನಡಾದಲ್ಲಿ ಸಿಖ್ ನಾಯಕನ ಹತ್ಯೆಯ ಕುರಿತು ಜಗತ್ತಿನ ಹೆಚ್ಚಿನ ಗಮನ ಸೆಳೆದು, ಇದೊಂದು ಅಪರೂಪದ ವಿದ್ಯಮಾನವಲ್ಲ, ಬದಲಿಗೆ ಭಾರತದ ಸಾಮಾನ್ಯ ನಡವಳಿಕೆಯ ರೀತಿ ಎಂದು ರೂಪಿಸಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿದೆ.


ಇದನ್ನೂ ಓದಿ- ಸರ್ವಾಧಿಕಾರಿ ಪುಟಿನ್ ಮತ್ತವರ ಜೀವಭಯ: ಮಾಜಿ ರಕ್ಷಣಾ ಅಧಿಕಾರಿಗಳು ಬಯಲಿಗೆಳೆದ ರಹಸ್ಯಗಳು


ಆದರೆ, ಕೆನಡಾದಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಪ್ರಬಲ ಭಾರತ ವಿರೋಧಿ ನಿಲುವಿನಿಂದ ಅದಕ್ಕೆ ರಾಜತಾಂತ್ರಿಕ ಪ್ರಯೋಜನ ತಂದುಕೊಡಲಿದೆಯೇ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಲಾಹೋರ್ ಗ್ಯಾರಿಸನ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ಮುಖ್ಯಸ್ಥರಾದ ಡಾ. ಜೈ಼ನಾಬ್ ಅಹ್ಮದ್ ಅವರ ಪ್ರಕಾರ, ಈ ಬಿಕ್ಕಟ್ಟಿನಲ್ಲಿ ಒಳಗೊಂಡಿರುವ ರಾಷ್ಟ್ರಗಳು ಪಾಕಿಸ್ತಾನದ ರಾಜತಾಂತ್ರಿಕ ಪ್ರಭಾವವನ್ನು ಮೀರಿದ ಬೃಹತ್ ರಾಷ್ಟ್ರಗಳಾಗಿವೆ. ಅವರ ಪ್ರಕಾರ, ಈಗ ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ಕೆನಡಾ ಮತ್ತು ಭಾರತದ ನಡುವಿನ ಉದ್ವಿಗ್ನತೆಯನ್ನು ಶಾಂತಗೊಳಿಸಲು ಪ್ರಯತ್ನ ನಡೆಸುತ್ತಿವೆ. ಆ ಮೂಲಕ ಒಂದು ವಿವೇಚನಾಯುಕ್ತ ನಿರ್ಣಯಕ್ಕೆ ಬರಲು ಬಯಸುತ್ತಿವೆ.


ಅಹ್ಮದ್ ಅವರ ಪ್ರಕಾರ, ತಾನು ಭಾರತದ ವಿರುದ್ಧ ಹೊರಿಸುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಜಾಗತಿಕ ನಾಯಕರ ಗಮನ ಸೆಳೆಯಲು ಪಾಕಿಸ್ತಾನದ ಅಂತಾರಾಷ್ಟ್ರೀಯ ನೀತಿಗಳು ಸಮರ್ಥವಾಗಿಲ್ಲ. ಇದು ಪಾಕಿಸ್ತಾನಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಸಂದರ್ಭ ಎಂದಿರುವ ಅಹ್ಮದ್ ಅವರು, ಪಾಕಿಸ್ತಾನ ತಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ಬಳಿ ಇರುವ ಸಾಕ್ಷಿಗಳನ್ನು ಜಗತ್ತಿನ ಮುಂದಿಡಬೇಕು ಮತ್ತು ತನ್ನ ಆಂತರಿಕ ವಿಚಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದಿದ್ದರು.


ಅದೇನೇ ಆದರೂ, ಪಾಕಿಸ್ತಾನದ ದೃಷ್ಟಿಯಲ್ಲಿ ಭಾರತ ಈಗ ಪ್ರಪಂಚದಾದ್ಯಂತ ಹತ್ಯೆಗಳನ್ನು ನಡೆಸುವಷ್ಟು ದಿಟ್ಟತನ ಹೊಂದಿದೆ. ಓರ್ವ ಪಾಕಿಸ್ತಾನಿ ಭದ್ರತಾ ಅಧಿಕಾರಿಯೊಬ್ಬರು ಕೆನಡಾ ಹತ್ಯೆಯನ್ನು 'ಭಾರತದ ಜಮಾಲ್ ಖಶೋಗ್ಗಿ ವಿದ್ಯಮಾನ' ಎಂದು ಕರೆದಿದ್ದಾರೆ. ಆ ಅಧಿಕಾರಿ, ದೀರ್ಘಕಾಲದಿಂದ ಪಾಕಿಸ್ತಾನ ಆರೋಪಿಸುತ್ತಿದ್ದ ಭಾರತದ ನೈಜ ಮುಖವನ್ನು ಜಗತ್ತು ಈಗ ನೋಡುತ್ತಿದೆ ಎಂದಿದ್ದಾರೆ.


ಭಾರತದ ಜಮಾಲ್ ಖಶೋಗ್ಗಿ ವಿದ್ಯಮಾನ ಎನ್ನುವುದು, ನಿಜ್ಜರ್ ಹತ್ಯೆ ಮತ್ತು ಜಮಾಲ್ ಖಶೋಗ್ಗಿ ಅವರ ಹತ್ಯೆಗಳ ನಡುವೆ ಹೋಲಿಕೆ ನಡೆಸುವುದಾಗಿದೆ. ಜಮಾಲ್ ಖಶೋಗ್ಗಿ ಸೌದಿ ಅರೇಬಿಯಾದ ಪತ್ರಕರ್ತರಾಗಿದ್ದು, ಅವರನ್ನು 2018ರಲ್ಲಿ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾದ ದೂತಾವಾಸ ಕಚೇರಿಯಲ್ಲಿ ಹತ್ಯೆಗೈಯಲಾಗಿತ್ತು. ಅವರ ಹತ್ಯೆ ಜಾಗತಿಕ ಗಮನ ಸೆಳೆದು, ಆ ಹತ್ಯೆಗೆ ಅಪಾರ ಖಂಡನೆ ವ್ಯಕ್ತವಾಗಿತ್ತು. ಅದು ಸರ್ಕಾರ (ಈ ಪ್ರಕರಣದಲ್ಲಿ ಸೌದಿ ಅರೇಬಿಯಾ) ತನ್ನ ಶತ್ರು ಅಥವಾ ಟೀಕಾಕಾರರನ್ನು ಹಣಿಯಲು ತನ್ನ ಗಡಿಯಾಚೆಗೆ ಕೈಗೊಂಡ ಕಾರ್ಯಾಚರಣೆ ಎನ್ನಲಾಗಿದೆ.


ಇದನ್ನೂ ಓದಿ- ಧ್ರುವಾಸ್ತ್ರ: ಚೀನಾ - ಪಾಕಿಸ್ತಾನಗಳಿಗೆ ಎಚ್ಚರಿಕೆಯ ಗಂಟೆ ಮೊಳಗಿಸಲಿದೆ ಭಾರತದ ಹೆಲಿಕಾಪ್ಟರ್ ಅಳವಡಿತ ಆ್ಯಂಟಿ ಟ್ಯಾಂಕ್ ಕ್ಷಿಪಣಿ


ಕೆನಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಆರೋಪವನ್ನು, ಜಮಾಲ್ ಖಶೋಗ್ಗಿ ಪ್ರಕರಣದ ರೀತಿಯಲ್ಲೇ ಜಾಗತಿಕ ಪರಿಣಾಮ ಬೀರಬಲ್ಲ ಘಟನೆ ಎಂದು ಪಾಕಿಸ್ತಾನ ಗ್ರಹಿಸುತ್ತಿದೆ. ಈ ಘಟನೆ, ಭಾರತ ತನ್ನ ಗಡಿಯ ವ್ಯಾಪ್ತಿಯನ್ನು ಮೀರಿ ಕೈಗೊಳ್ಳುವ ಕ್ರಮಗಳನ್ನು ಪ್ರತಿನಿಧಿಸುತ್ತಿದ್ದು, ಈ ಕುರಿತು ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆಯಬೇಕೆಂದು ಪಾಕಿಸ್ತಾನ ಬಯಸುತ್ತಿದೆ.


ಈಗ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ, ಈ ರೀತಿಯ ಹತ್ಯೆಗಳನ್ನು ನಡೆಸುವಲ್ಲಿ ಭಾರತದ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಪಾಕಿಸ್ತಾನಿ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.


ಪಾಕಿಸ್ತಾನದ ಅಧಿಕಾರಿಗಳು, ಪಾಕಿಸ್ತಾನದ ಒಳಗೂ ಅಪಾಯಕಾರಿ ಚಟುವಟಿಕೆಗಳನ್ನು ಭಾರತ ಕೈಗೊಳ್ಳುವ ಸಾಧ್ಯತೆಗಳ ಕುರಿತು ಕಳವಳ ಹೊಂದಿದ್ದಾರೆ. ಒಂದು ವೇಳೆ ಅಂತಹ ಘಟನೆಗಳು ನಡೆದರೆ, ಅದರ ಪರಿಣಾಮವಾಗಿ ಪ್ರಾದೇಶಿಕ ಸ್ಥಿರತೆ ಹಾಳಾಗಿ, ಭಾರತದಲ್ಲೂ ಸಂಘರ್ಷಗಳು ತಲೆದೋರಬಹುದು ಎಂದು ಪಾಕಿಸ್ತಾನಿ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.


ಲೇಖಕರು - ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.