ಧ್ರುವಾಸ್ತ್ರ: ಚೀನಾ - ಪಾಕಿಸ್ತಾನಗಳಿಗೆ ಎಚ್ಚರಿಕೆಯ ಗಂಟೆ ಮೊಳಗಿಸಲಿದೆ ಭಾರತದ ಹೆಲಿಕಾಪ್ಟರ್ ಅಳವಡಿತ ಆ್ಯಂಟಿ ಟ್ಯಾಂಕ್ ಕ್ಷಿಪಣಿ

Anti-tank missiles : ಭಾರತ ದೇಶೀಯವಾಗಿ ನಿರ್ಮಿಸಿರುವ, ಹೆಲಿಕಾಪ್ಟರ್‌ನಿಂದ ಉಡಾವಣೆಗೊಳಿಸಬಲ್ಲ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ವ್ಯವಸ್ಥೆಯಾದ ಧ್ರುವಾಸ್ತ್ರವನ್ನು ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.   

Written by - Girish Linganna | Last Updated : Sep 16, 2023, 08:04 PM IST
  • ಭಾರತ ದೇಶೀಯವಾಗಿ ನಿರ್ಮಿಸಿರುವ ಮಿಸೈಲ್
  • ಹೆಲಿಕಾಪ್ಟರ್‌ನಿಂದ ಉಡಾವಣೆಗೊಳಿಸಬಲ್ಲ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್
  • ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾದ ಪರೀಕ್ಷೆ
ಧ್ರುವಾಸ್ತ್ರ: ಚೀನಾ - ಪಾಕಿಸ್ತಾನಗಳಿಗೆ ಎಚ್ಚರಿಕೆಯ ಗಂಟೆ ಮೊಳಗಿಸಲಿದೆ ಭಾರತದ ಹೆಲಿಕಾಪ್ಟರ್ ಅಳವಡಿತ ಆ್ಯಂಟಿ ಟ್ಯಾಂಕ್ ಕ್ಷಿಪಣಿ  title=

ಬೆಂಗಳೂರು : ಭಾರತ ದೇಶೀಯವಾಗಿ ನಿರ್ಮಿಸಿರುವ, ಹೆಲಿಕಾಪ್ಟರ್‌ನಿಂದ ಉಡಾವಣೆಗೊಳಿಸಬಲ್ಲ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ವ್ಯವಸ್ಥೆಯಾದ ಧ್ರುವಾಸ್ತ್ರವನ್ನು ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ. ಮೊದಲು ಹೆಲಿನಾ ಎಂದು ಪರಿಚಿತವಾಗಿದ್ದ ಈ ಕ್ಷಿಪಣಿ ವ್ಯವಸ್ಥೆ, ಭೂಮಿಯಿಂದ ಮತ್ತು ಆಕಾಶದಿಂದ ಪ್ರಯೋಗಿಸಬಹುದಾದ ನಾಗ್ ಕ್ಷಿಪಣಿಯ ಹೊಸ ಆವೃತ್ತಿಯಾಗಿದೆ. ಧ್ರುವಾಸ್ತ್ರವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (ಐಜಿಎಂಡಿಪಿ) ಅಡಿಯಲ್ಲಿ ನಿರ್ಮಿಸಲಾಗಿದೆ.

ಧ್ರುವಾಸ್ತ್ರದ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯ

ಧ್ರುವಾಸ್ತ್ರ ಮೂರನೇ ತಲೆಮಾರಿನ ಫೈರ್ ಆ್ಯಂಡ್ ಫಾರ್ಗೆಟ್ ಎಟಿಜಿಎಂ ವ್ಯವಸ್ಥೆಯಾಗಿದ್ದು, ಶತ್ರುಗಳ ಯುದ್ಧ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳ ಮೇಲೆ ನೇರವಾಗಿ ದಾಳಿ ಮಾಡಬಹುದು ಅಥವಾ ಮೇಲಿನಿಂದ ದಾಳಿ ನಡೆಸಬಲ್ಲದು (ಟಾಪ್ ಅಟ್ಯಾಕ್ ಮೋಡ್). ಈ ಕ್ಷಿಪಣಿ ಕನಿಷ್ಠ 500 ಮೀಟರ್‌ನಿಂದ ಗರಿಷ್ಠ 7 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದನ್ನು ಆಗಸದಲ್ಲಿ 4 ಕಿಲೋಮೀಟರ್‌ಗಳಷ್ಟು ಎತ್ತರದಿಂದ ಉಡಾವಣೆಗೊಳಿಸಬಹುದಾಗಿದ್ದು, ಪ್ರತಿ ಗಂಟೆಗೆ 70 ಕಿಲೋಮೀಟರ್‌ಗಳಷ್ಟು ವೇಗದಲ್ಲಿ ಚಲಿಸುವ ವಾಹನಗಳ ಮೇಲೆ ನಿಖರ ದಾಳಿ ನಡೆಸಬಲ್ಲದು.

The anti-tank guided missile

ಧ್ರುವಾಸ್ತ್ರದಲ್ಲಿ ಒಂದು ಇಮೇಜಿಂಗ್ ಇನ್‌ಫ್ರಾರೆಡ್ ಸೀಕರ್ ಉಪಕರಣವನ್ನು ಅಳವಡಿಸಲಾಗಿದ್ದು, ಇದು ಕ್ಷಿಪಣಿಯನ್ನು ಉಷ್ಣತೆಯ ಸಂಕೇತದ ಆಧಾರದಲ್ಲಿ ಗುರಿಯೆಡೆಗೆ ನಿರ್ದೇಶಿಸುತ್ತದೆ. ಈ ಸೀಕರ್ ಕ್ಷಿಪಣಿ ಉಡಾವಣೆಗೊಳ್ಳುವ ಮೊದಲು, ಅಥವಾ ಉಡಾವಣೆಗೊಂಡ ಬಳಿಕ ಗುರಿಯನ್ನು ಲಾಕ್ ಮಾಡಬಲ್ಲದು. ಕ್ಷಿಪಣಿಯಲ್ಲಿರುವ ಒಂದು ವಿಶೇಷ ಸಿಡಿತಲೆ, ಸಾಮಾನ್ಯ ರಕ್ಷಾ ಕವಚ ಅಥವಾ ಸ್ಫೋಟಕ ತಡೆ ಕವಚಗಳನ್ನು ಒಳಗೊಂಡಿರುವ ಶತ್ರು ಟ್ಯಾಂಕ್‌ಗಳನ್ನು ಭೇದಿಸಿ ಒಳನುಗ್ಗಬಲ್ಲದು. ಧ್ರುವಾಸ್ತ್ರ ಎಲ್ಲ ಹವಾಮಾನದಲ್ಲಿ, ಹಗಲು ರಾತ್ರಿಗಳಲ್ಲಿ, ಮರುಭೂಮಿ, ಬಯಲು, ಬೆಟ್ಟ, ಕಾಡುಗಳಲ್ಲೂ ಕಾರ್ಯಾಚರಿಸಬಲ್ಲದು.

ಸಾಮಾನ್ಯ ರಕ್ಷಣಾ ಕವಚ ಎಂದರೆ ಟ್ಯಾಂಕ್‌ಗಳಲ್ಲಿರುವ ಸಾಮಾನ್ಯ ಕವಚವಾಗಿದೆ. ಎಕ್ಸ್‌ಪ್ಲೋಸಿವ್ ರಿಟ್ರಾಕ್ಟಿವ್ ಆರ್ಮರ್ (ಸ್ಫೋಟಕ ತಡೆ ಕವಚ - ಇಆರ್‌ಎ) ಎನ್ನುವುದು ಒಂದು ಹೆಚ್ಚುವರಿ ಪದರವಾಗಿದ್ದು, ಅದರ ಮೇಲೆ ದಾಳಿ ನಡೆದಾಗ ಸ್ಫೋಟಿಸಿ, ದಾಳಿಯ ಪರಿಣಾಮವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತದೆ.

ಇನ್‌ಫ್ರಾರೆಡ್ ಇಮೇಜಿಂಗ್ ಸೀಕರ್ (ಐಐಎಸ್) ಒಂದು ಅತ್ಯಾಧುನಿಕ ವ್ಯವಸ್ಥೆಯಾಗಿದ್ದು, ಇನ್‌ಫ್ರಾರೆಡ್ (ಅತಿಗೆಂಪು) ತಂತ್ರಜ್ಞಾನವನ್ನು ಬಳಸಿಕೊಂಡು ಗುರಿಯನ್ನು ಗುರುತಿಸಲು, ಅದನ್ನು ಹಿಂಬಾಲಿಸಲು ನೆರವಾಗುತ್ತದೆ. ಇದು ವಸ್ತುಗಳಿಂದ ಹೊರಬರುವ ಉಷ್ಣತೆಯನ್ನು ರಾತ್ರಿಯ ವೇಳೆಯಲ್ಲೂ, ಹವಾಮಾನ ವೈಪರೀತ್ಯಗಳಲ್ಲೂ ನಿಖರವಾಗಿ ಗುರುತಿಸಿ, ಕ್ಷಿಪಣಿ ಗುರಿಯೆಡೆಗೆ ಕರಾರುವಾಕ್ಕಾಗಿ ಚಲಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿಯಾಗಲು ಚಂದ್ರನತ್ತ ಪ್ರಯಾಣಿಸಬೇಕು": ಹಿಮಂತ ಶರ್ಮಾ 

ಧ್ರುವಾಸ್ತ್ರವನ್ನು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಧ್ರುವದಲ್ಲಿ ಅಳವಡಿಸಲಾಗಿದ್ದು, ಈ ಹೆಲಿಕಾಪ್ಟರ್ ಅನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ದೇಶೀಯವಾಗಿ ಅಭಿವೃದ್ಧಿ ಪಡಿಸಿದೆ. ಎಎಲ್ಎಚ್ ಧ್ರುವ ನಾಲ್ಕು ಅವಳಿ ಲಾಂಚರ್‌ಗಳಲ್ಲಿ ಎಂಟು ಧ್ರುವಾಸ್ತ್ರ ಕ್ಷಿಪಣಿಗಳನ್ನು ಒಯ್ಯಬಲ್ಲದು. ಹೆಲಿಕಾಪ್ಟರ್‌ನಲ್ಲಿ ಹೆಲ್ಮೆಟ್ ಅಳವಡಿತ ಸ್ಕ್ರೀನ್ ಇದ್ದು, ಪೈಲಟ್‌ಗೆ ಗುರಿಯನ್ನು ನೋಡುತ್ತಲೇ ಅದರೆಡೆಗೆ ಕ್ಷಿಪಣಿಯನ್ನು ಗುರಿಯಾಗಿಸಲು ನೆರವಾಗುತ್ತದೆ. ಹೆಲಿಕಾಪ್ಟರ್‌ನಲ್ಲಿ ಒಂದು ಡೇಟಾ ಲಿಂಕ್ ಇದ್ದು, ಗುರಿಯ ಕುರಿತ ಮಾಹಿತಿಗಳನ್ನು ಕ್ಷಿಪಣಿಗೆ ಕಳುಹಿಸುತ್ತದೆ.

ಧ್ರುವಾಸ್ತ್ರದ ಮಹತ್ವ ಹಾಗೂ ಭವಿಷ್ಯದ ಬಳಕೆ

ಕ್ಷಿಪಣಿ ತಂತ್ರಜ್ಞಾನ ಹಾಗೂ ರಕ್ಷಣಾ ಉಪಕರಣ ನಿರ್ಮಾಣ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಧ್ರುವಾಸ್ತ್ರ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಕ್ಷಿಪಣಿ ವ್ಯವಸ್ಥೆ ಯುದ್ಧ ಟ್ಯಾಂಕ್‌ಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳ ವಿರುದ್ಧ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಕ್ಷಿಪಣಿ ವ್ಯವಸ್ಥೆ ಅಪಾರ ಟ್ಯಾಂಕ್‌ಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳನ್ನು ಹೊಂದಿರುವ ಪಾಕಿಸ್ತಾನ ಮತ್ತು ಚೀನಾಗಳ ವಿರುದ್ಧ ಗಡಿ ಚಕಮಕಿ ನಡೆದರೂ ಭಾರತಕ್ಕೆ ಮೇಲುಗೈ ಒದಗಿಸಲಿದೆ.

ಇನ್ನು ಡಿಆರ್‌ಡಿಓ ಈಗಾಗಲೇ ನಾಗ್ ಕ್ಷಿಪಣಿಯ ಮಾನವರು ಒಯ್ಯಬಲ್ಲ ಆವೃತ್ತಿಯಾದ ಮ್ಯಾನ್ ಪೋರ್ಟೆಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಂಪಿಎಟಿಜಿಎಂ) ಅನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಪದಾತಿ ದಳದ ಸೈನಿಕರು ಸಾಗಿಸಬಹುದು. ಎಂಪಿಎಟಿಜಿಎಂ 2.5 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದ್ದು, ಸಣ್ಣ ವ್ಯಾಪ್ತಿಯ ಟ್ಯಾಂಕ್ ನಿರೋಧಕ ಯೋಜನೆಗಳಲ್ಲಿ ಬಳಸಿಕೊಳ್ಳಬಹುದು. ಡಿಆರ್‌ಡಿಓ ಹೆಚ್ಚಿನ ವ್ಯಾಪ್ತಿ ಹೊಂದಿರುವ ನಾಗ್ ಕ್ಷಿಪಣಿಯ ಆವೃತ್ತಿಯ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದು, ಸ್ಯಾಂಟ್ (SANT) ಎಂದು ಕರೆಯಲಾಗುವ ಈ ಆವೃತ್ತಿ 15 - 20 ಕಿಲೋಮೀಟರ್ ವ್ಯಾಪ್ತಿ ಹೊಂದಿರಲಿದೆ. ಇದನ್ನು ಹೆಲಿಕಾಪ್ಟರ್‌ಗಳಿಂದ ಹಾಗೂ ಡ್ರೋನ್‌ಗಳಿಂದ ಉಡಾವಣೆಗೊಳಿಸಬಹುದಾಗಿದೆ.

ಧ್ರುವಾಸ್ತ್ರದ ಯಶಸ್ವಿ ಉಡಾವಣೆ ಭಾರತದ ದೇಶೀಯ ಕ್ಷಿಪಣಿ ಅಭಿವೃದ್ಧಿ ಯೋಜನೆಗೆ ದೊರೆತ ಮಹತ್ವದ ಮೇಲುಗೈಯಾಗಿದ್ದು, ಭಾರತದ ರಕ್ಷಣಾ ಸಿದ್ಧತೆಯನ್ನೂ ಉತ್ತೇಜಿಸುತ್ತದೆ. ಈ ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾ ಪ್ರಯೋಗಗಳು ಪೂರ್ಣಗೊಂಡ ಬಳಿಕ ಇದನ್ನು ಭಾರತೀಯ ಸೇನೆ ಹಾಗೂ ವಾಯುಪಡೆಗೆ ಸೇರ್ಪಡೆಗೊಳಿಸಲಾಗುತ್ತದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಪ್ರತೀಕಾರ ತೀರಿಸಿಕೊಂಡ ಸೇನೆ: ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ವಾಸ್ತ್ರ ಕ್ಷಿಪಣಿಗಳ ಖರೀದಿಗೆ ರಕ್ಷಣಾ ಖರೀದಿ ಸಮಿತಿ (ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ - ಡಿಎಸಿ) ಅನುಮತಿ ನೀಡಿರುವುದು ಭಾರತದ ರಕ್ಷಣಾ ಸ್ವಾವಲಂಬನೆ ಹಾಗೂ ಸ್ವದೇಶೀ ಕ್ಷಿಪಣಿ ಯೋಜನೆಗಳಿಗೆ ಮಹತ್ವದ ಯಶಸ್ಸಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯ ಡಿಎಸಿ ಸೆಪ್ಟೆಂಬರ್ 15ರಂದು 45,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಖರೀದಿಗೆ ಹಸಿರು ನಿಶಾನೆ ತೋರಿದೆ. ಈ ಅನುಮತಿಯಲ್ಲಿ, ದೇಶೀಯವಾಗಿ ನಿರ್ಮಿಸಿರುವ ಎಎಲ್ಎಚ್ ಎಂಕೆ-IV ಹೆಲಿಕಾಪ್ಟರ್‌ಗಳಲ್ಲಿ ಅಳವಡಿಸಲು ಧ್ರುವಾಸ್ತ್ರ ಕಡಿಮೆ ವ್ಯಾಪ್ತಿಯ ಗಾಳಿಯಿಂದ ಭೂಮಿಗೆ ದಾಳಿ ನಡೆಸಬಲ್ಲ ನಿಖರ ನಿರ್ದೇಶನ ಹೊಂದಿರುವ ಕ್ಷಿಪಣಿಯ ಖರೀದಿಯೂ ಸೇರಿದೆ. ಡಿಎಸಿ 12 ಸು-30 ಎಂಕೆಐ ವಿಮಾನಗಳು ಮತ್ತು ಸಂಬಂಧಿತ ಉಪಕರಣಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿಂದ ಖರೀದಿಸಲು ಸಮ್ಮತಿಸಿದೆ. ಸು-30 ಎಂಕೆಐ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗಳ ವಾಯು ಬಲ ಹಾಗೂ ದಾಳಿ ಸಾಮರ್ಥ್ಯಗಳನ್ನು ಹೆಚ್ಚಿಸಲಿವೆ. ರಕ್ಷಣಾ ಸಚಿವರು ನಾವು ದೇಶೀಯ ಆಯುಧ ನಿರ್ಮಾಣದ ಕುರಿತು ಗಮನ ಹರಿಸಿ, ಕನಿಷ್ಠ 60-65% ದೇಶೀಯ ವಿನ್ಯಾಸ, ಅಭಿವೃದ್ಧಿ ಹಾಗೂ ಉತ್ಪಾದನೆಯ (ಐಡಿಡಿಎಂ) ಉಪಕರಣಗಳನ್ನು ಹೊಂದುವ ಗುರಿ ಸಾಧಿಸಬೇಕು ಎಂದಿದ್ದಾರೆ.

ಲೇಖಕರು - ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News