ಮುಂಬೈ: ನಗರಾದ್ಯಂತ ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೆಲ್ಲಾ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 


COMMERCIAL BREAK
SCROLL TO CONTINUE READING

ಮುಂಬೈ ನಗರದ ಅಂಧೇರಿ, ಕುರ್ಲಾ, ಬಾಂದ್ರಾ, ಚಾರ್ನಿ ರಸ್ತೆ, ಸಾಂತಾ ಕ್ರೂಸ್, ಬಿಕೆಸಿ ಮತ್ತಿತರ ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲ್ವೆ ಹಳಿಗಳು ಜಲಾವೃತವಾಗಿದ್ದು, ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಇನ್ನೂ ಕೆಲವು ದಿನಗಳು ಮಳೆ ಮುಂದುವರೆಯಲಿದ್ದು, ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 



"ಕಳೆದ ರಾತ್ರಿ ವಾಣಿಜ್ಯ ನಗರಿ ಮುಂಬೈಯಲ್ಲಿ 361 ಮಿಲಿ ಮೀಟರ್ ನಷ್ಟು ಧಾರಾಕಾರ ಮಳೆ ಸುರಿದಿದ್ದು ಇಂದು ನಸುಕಿನ ಜಾವ ಮುಂಬೈಯ ಪಲ್ಗರ್ ಪ್ರದೇಶದಲ್ಲಿ 4 ಗಂಟೆಯಿಂದ 5 ಗಂಟೆಯವರೆಗೆ 1 ಗಂಟೆಯಲ್ಲಿ 100 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ. ಪಶ್ಚಿಮ ರೈಲ್ವೆ ವಿಭಾಗದ 13 ರೈಲುಗಳ ಸಂಚಾರವನ್ನು ಇಂದು ಮಳೆಯ ಕಾರಣದಿಂದ ರದ್ದುಪಡಿಸಲಾಗಿದೆ" ಎಂದು ಎಎನ್ಐ ವರದಿ ಮಾಡಿದೆ.


ಪಾಲ್ಗಾಟ್ ಪ್ರದೇಶದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮುಂಬೈ-ವಲ್ಸಾಡ್-ಸೂರತ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.