ಈ ವರ್ಷ ಶಾಲಾ ಶುಲ್ಕ ಹೆಚ್ಸಿಸದಂತೆ ಖಾಸಗಿ ಶಾಲೆಗಳಿಗೆ ಮಾನವ ಸಂಪನ್ಮೂಲ ಸಚಿವರ ಮನವಿ
ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಅನೇಕ ಶಾಲೆಗಳು ತಮ್ಮ ವಾರ್ಷಿಕ ಶುಲ್ಕವನ್ನು ಹೆಚ್ಚಿಸುತ್ತಿವೆ ಎಂದು ದೇಶಾದ್ಯಂತದ ಅನೇಕ ಪೋಷಕರಿಂದ ನನಗೆ ದೂರುಗಳು ಬಂದಿವೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದರು.
ನವದೆಹಲಿ: ಕೊರೋನಾವೈರಸ್ ಕೋವಿಡ್-19 (Covid-19) ಅನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ (Lockdown) ಜಾರಿಗೆ ತರಲಾಗಿದ್ದು ಏತನ್ಮಧ್ಯೆ ಶಾಲಾ ಶುಲ್ಕ ಹೆಚ್ಚಳ ಪೋಷಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಹಲವು ಪೋಷಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಈ ವರ್ಷ ವಾರ್ಷಿಕ ಶಾಲಾ ಶುಲ್ಕವನ್ನು ಹೆಚ್ಚಿಸದಂತೆ ಹಾಗೂ ಮೂರು ತಿಂಗಳ ಶುಲ್ಕವನ್ನು ಒಟ್ಟಿಗೆ ತೆಗೆದುಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ದೇಶಾದ್ಯಂತದ ಖಾಸಗಿ ಶಾಲೆಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪೋಖ್ರಿಯಾಲ್ ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಅನೇಕ ಶಾಲೆಗಳು ತಮ್ಮ ವಾರ್ಷಿಕ ಶುಲ್ಕವನ್ನು ಹೆಚ್ಚಿಸುತ್ತಿವೆ ಮತ್ತು ಮೂರು ತಿಂಗಳ ಶುಲ್ಕವನ್ನು ಒಟ್ಟಿಗೆ ತೆಗೆದುಕೊಳ್ಳುತ್ತಿವೆ ಎಂದು ದೇಶಾದ್ಯಂತದ ಅನೇಕ ಪೋಷಕರಿಂದ ನನಗೆ ದೂರುಗಳು ಬಂದಿವೆ.
ಈ ಜಾಗತಿಕ ದುರಂತದ ಸಮಯದಲ್ಲಿ ಎಲ್ಲಾ ಶಾಲೆಗಳು ವಾರ್ಷಿಕ ಶಾಲಾ ಶುಲ್ಕ ಹೆಚ್ಚಳವನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಮತ್ತು ಮೂರು ತಿಂಗಳು ಶುಲ್ಕವನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಎಂದು ಖಾಸಗಿ ಶಾಲೆಗಳಿಗೆ ವಿನಂತಿ ಮಾಡಿದ್ದಾರೆ.
ಲಾಕ್‌ಡೌನ್ ನಡುವೆ ಪೋಷಕರಿಗೆ ಹೊರೆಯಾದ ಶಾಲಾ ಶುಲ್ಕ
ಇದಲ್ಲದೆ ಶಾಲಾ ಶುಲ್ಕಗಳು ಮತ್ತು ಸಿಬ್ಬಂದಿ ವೇತನ ಪಾವತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸಿಬಿಎಸ್‌ಇ (CBSE) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ಮತ್ತೊಂದೆಡೆ ಕರೋನಾ ವೈರಸ್‌ನಿಂದಾಗಿ ಶಿಕ್ಷಣ ಮತ್ತು ಆರ್ಥಿಕತೆಯು ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಶುಕ್ರವಾರ ಹೇಳಿದ್ದಾರೆ. ಕೆಲವು ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂದು ವೈಯಕ್ತಿಕವಾಗಿ ನನಗೆ ಮತ್ತು ಸರ್ಕಾರಕ್ಕೆ ಅನೇಕ ಸ್ಥಳಗಳಿಂದ ದೂರುಗಳು ಬರುತ್ತಿವೆ. ಈ ಜನರು ಸರ್ಕಾರದ ಅನುಮತಿಯಿಲ್ಲದೆ ಶುಲ್ಕವನ್ನು ಹೆಚ್ಚಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ದೆಹಲಿಯ ಖಾಸಗಿ ಶಾಲೆಗಳು ಸರ್ಕಾರವನ್ನು ಕೇಳದೆ ಶುಲ್ಕವನ್ನು ಹೆಚ್ಚಿಸುವಂತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಆದೇಶಿಸಿರುವುದನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಇದಲ್ಲದೆ ಒಂದೇ ಬಾರಿಗೆ ಪೋಷಕರಿಗೆ ಮೂರು ತಿಂಗಳ ಶುಲ್ಕವನ್ನು ಸಂಗ್ರಹಿಸದಂತೆ ಅವರು ಶಾಲೆಗಳಿಗೆ ಸೂಚನೆ ನೀಡಿದ್ದಾರೆ.