ತಾಯಿ, ಪತ್ನಿಯನ್ನು ಭೇಟಿ ಮಾಡಲು ಕುಲಭೂಷಣ್ ಜಾಧವ್ ಗೆ ಅನುಮತಿ
ಪಾಕಿಸ್ಥಾನ ಡಿ.8ರಂದು ಜಾಧವ್ ಅವರ ಮಕ್ಕಳಿಗೂ ಅನುಮತಿ ನೀಡಿತ್ತು. ಕಳೆದ ಡಿ.20ರಂದು ಪಾಕ್ ಸರಕಾರ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ವೀಸಾ ಮಂಜೂರು ಮಾಡಿತ್ತು.
ನವದೆಹಲಿ : 22 ಬಾರಿ ಕೌನ್ಸಿಲರ್ ಸಂಪರ್ಕಾವಕಾಶವನ್ನು ನಿರಾಕರಿಸಲಾಗಿದ್ದ ಪಾಕಿಸ್ತಾನ ಸರ್ಕಾರ ಇಂದು ಕೊನೆಗೂ ಕುಲಭೂಷಣ್ ಜಾಧವ್‌ಗೆ ದಯಪಾಲಿಸಿದೆ. ಈ ಮಾಹಿತಿಯನ್ನು ಪಾಕ್ ವಿದೇಶ ಸಚಿವಾಲಯ ಜಿಯೋ ಟಿವಿ ಜತೆಗೆ ಹಂಚಿಕೊಂಡಿದೆ.
ಕುಲಭೂಷಣ್ ಜಾಧವ್ ಅವರ ತಾಯಿ ಮತ್ತು ಪತ್ನಿಯ ಜತೆಗೆ ಇಸ್ಲಾಮಾಬಾದ್‌ಗೆ ತೆರಳಲಿರುವ ಭಾರತೀಯ ಡೆಪ್ಯುಟಿ ಹೈಕಮಿಶನರ್ ಜೆ.ಪಿ.ಸಿಂಗ್ ಅವರಿಗೆ ಮಾತ್ರ ಜಾಧವ್ ಅವರನ್ನು ಕಾಣುವ ಅವಕಾಶ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ದುರದೃಷ್ಟವಶಾತ್ ಜಾಧವ್ ಅವರ ಮಕ್ಕಳು ಪ್ರಯಾಣಿಸಲಿದ್ದ ವಿಮಾನವು ವಿಳಂಬವಾಗಿದೆ. ಇವರು ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯವರನ್ನು ಸೇರಿಕೊಳ್ಳಲಿದ್ದಾರೆ. ಅನಂತರ ಅವರೆಲ್ಲ ಜತೆಯಾಗಿ ಇಸ್ಲಾಮಾಬಾದ್‌ಗೆ ವಾಣಿಜ್ಯ ವಿಮಾನವೊಂದರಲ್ಲಿ ಪ್ರಯಾಣಿಸಲಿದ್ದಾರೆ. ಜಾಧವ್ ಅವರನ್ನು ಭೇಟಿಯಾದ ಬಳಿಕ ಅದೇ ದಿನ ಸ್ವದೇಶಕ್ಕೆ ಮರಳಲಿದ್ದಾರೆ.
ಪಾಕಿಸ್ಥಾನ ಡಿ.8ರಂದು ಜಾಧವ್ ಅವರ ಮಕ್ಕಳಿಗೂ ಅನುಮತಿ ನೀಡಿತ್ತು. ಕಳೆದ ಡಿ.20ರಂದು ಪಾಕ್ ಸರಕಾರ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ವೀಸಾ ಮಂಜೂರು ಮಾಡಿತ್ತು.
ಬೇಹು ಆರೋಪದ ಮೇಲೆ ಈ ವರ್ಷ ಏಪ್ರಿಲ್‌ನಲ್ಲಿ ಬಂಧಿಸಲ್ಪಟ್ಟಿದ್ದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ಪಾಕ್ ಮಿಲಿಟರಿ ಕೋರ್ಟ್ ಮರಣ ದಂಡನೆಯನ್ನು ವಿಧಿಸಿತ್ತು. ಈ ವರ್ಷ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಿದ್ದ ಭಾರತ, ಜಾಧವ್ ಅವರ ಗಲ್ಲು ಶಿಕ್ಷೆಗೆ ತಡೆ ತರುವಲ್ಲಿ ಸಫಲವಾಗಿತ್ತು.