ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಾಕಷ್ಟು ಅಡ್ಡಿ, ಆತಂಕ, ವಾಕ್ಸಮರದ ಬಳಿಕ 
'ಎನ್ಐಎ ತಿದ್ದುಪಡಿ ಮಸೂದೆ 2019' ಯನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. 


COMMERCIAL BREAK
SCROLL TO CONTINUE READING

ಭಾರತೀಯ ಭಯೋತ್ಪಾದನಾ ನಿಗ್ರಹ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು,  ಈ ಮೂಲಕ ವಿದೇಶಗಳಲ್ಲಿಯೂ ಭಾರತೀಯರ ಮೇಲೆ ನಡೆಯುವ ದಾಳಿಯ ತನಿಖೆ ನಡೆಸುವ ಅಧಿಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸಿಗಲಿದೆ. 


ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ಮೋದಿ ಸರ್ಕಾರ ಎನ್ಐಎ ಅನ್ನು ಧರ್ಮದ ಹೆಸರಿನಲ್ಲಿ ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ. ಆದರೆ ಆರೋಪಿಗಳು ಯಾವ ಧರ್ಮಕ್ಕೆ ಸೇರಿದ್ದರೂ ಅವರನ್ನು ಸೆದೆಬಡಿಯಲು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.


ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆ, 2019ರ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಶಾ ಅವರು ಭಯೋತ್ಪಾದನಾ-ವಿರೋಧಿ ಕಾಯ್ದೆ POTAವನ್ನು ರದ್ದುಪಡಿಸಿದ್ದಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಉಳಿಸಿಕೊಳ್ಳಲು ಮಾಡಿತು ಎಂದು ಕಿಡಿಕಾರಿದರು.


ಇದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ಸದನದ ಬೆಂಬಲ ಕೋರಿದ ಅಮಿತ್ ಶಾ, ಭಯೋತ್ಪಾದಕರಿಗೆ ಮತ್ತು ಜಗತ್ತಿಗೆ ಸಂದೇಶ ಕಳುಹಿಸಲು ಎನ್ಐಎಗೆ ಅಧಿಕಾರ ನೀಡುವಲ್ಲಿ ಸಂಸತ್ತು ಏಕರೀತಿಯಲ್ಲಿ ಧ್ವನಿ ಎತ್ತಬೇಕು ಎಂದು ಹೇಳಿದರು.


ಈ ಮಸೂದೆಯು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆ 2008 ಅನ್ನು ತಿದ್ದುಪಡಿ ಮಾಡಿ, ನಿಗದಿತ ಅಪರಾಧಗಳಲ್ಲಿ ಪಟ್ಟಿ ಮಾಡಲಾದ ಅಪರಾಧಗಳನ್ನು ತನಿಖೆ ಮಾಡಲು ಮತ್ತು ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅಧಿಕಾರ ನೀಡಲಿದ್ದು, ನಿಗದಿತ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ರಚಿಸಲು ಈ ಕಾಯಿದೆಯು ಅವಕಾಶ ನೀಡುತ್ತದೆ.


ಮಾನವ ಕಳ್ಳಸಾಗಣೆ, ನಕಲಿ ಕರೆನ್ಸಿ ಅಥವಾ ಬ್ಯಾಂಕ್ ನೋಟುಗಳಿಗೆ ಸಂಬಂಧಿಸಿದ ಅಪರಾಧಗಳು, ನಿಷೇಧಿತ ಶಸ್ತ್ರಾಸ್ತ್ರಗಳ ತಯಾರಿಕೆ ಅಥವಾ ಮಾರಾಟ, ಸೈಬರ್-ಭಯೋತ್ಪಾದನೆ ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆ 1908ರ ಅಡಿಯಲ್ಲಿ ಅಪರಾಧಗಳನ್ನು ತನಿಖೆ ಮಾಡಲು ಈ ಮಸೂದೆಯು ಎನ್ಐಎಗೆ ಅವಕಾಶ ನೀಡಲಿದೆ.