ಮಹಾಬಲಿಪುರಂ: ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್ ಸ್ವಾಗತಕ್ಕೆ ತರಕಾರಿ-ಹಣ್ಣುಗಳಿಂದ ಅಲಂಕೃತವಾದ ಕಮಾನು
ಸ್ವಾಗತ ಕಮಾನು ಸಿದ್ಧಪಡಿಸಲು ತೋಟಗಾರಿಕೆ ಇಲಾಖೆಯ 200 ಸಿಬ್ಬಂದಿ ಮತ್ತು ತರಬೇತಿ ಪಡೆದ ಕೆಲಸಗಾರರು ಸುಮಾರು 10 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ.
ಚೆನ್ನೈ: ಭಾರತ-ಚೀನಾ ಶೃಂಗ ಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶುಕ್ರವಾರ ಸಂಜೆ 5 ಗಂಟೆಗೆ ಮಹಾಬಲಿಪುರಂಗೆ ಆಗಮಿಸುತ್ತಿದ್ದು, ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದೆ.
ಮಹಾಬಲಿಪುರದ ಪಂಚ ರಥ್ ಬಳಿ ಮೋದಿ-ಜಿನ್‌ಪಿಂಗ್ ಅವರನ್ನು ಸ್ವಾಗತಿಸಲು ತಮಿಳುನಾಡಿನ ವಿವಿಧ ಪ್ರದೇಶಗಳಿಂದ 18 ಬಗೆಯ ತರಕಾರಿಗಳು ಮತ್ತು ಹಣ್ಣುಗಳನ್ನು ತರಿಸಿ, ತೋಟಗಾರಿಕೆ ಇಲಾಖೆ ವಿಶೇಷ ಸ್ವಾಗತ ಕಮಾನು ಸಿದ್ಧಪಡಿಸಿದೆ.
ಈ ಸ್ವಾಗತ ಕಮಾನು ಸಿದ್ಧಪಡಿಸಲು ತೋಟಗಾರಿಕೆ ಇಲಾಖೆಯ 200 ಸಿಬ್ಬಂದಿ ಮತ್ತು ತರಬೇತಿ ಪಡೆದ ಕೆಲಸಗಾರರು ಸುಮಾರು 10 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಧ್ಯಾಹ್ನ 2.10ಕ್ಕೆ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಕೇರಳದ ಪ್ರಸಿದ್ಧ ಸಾಂಪ್ರದಾಯಿಕ ನೃತ್ಯ, ಚೆಂಡ ಮೇಳಂ ಮೂಲಕ ಸ್ವಾಗತಿಸ್ವಾಗತಿಸಲು ನೃತ್ಯ ಕಲಾವಿದರು ಈಗಾಗಲೇ ವಿಮಾನ ನಿಲ್ದಾಣ ತಲುಪಿದ್ದಾರೆ.
ಅಲ್ಲದೆ, ಶೃಂಗಸಭೆ ನಡೆಯುವ ಬೃಹತ್ ವೇದಿಕೆ ಸುತ್ತಮುತ್ತ ಸುಮಾರು 5,000 ಪೊಲೀಸರನ್ನು ನಿಯೋಜಿಸಲಾಗಿದೆ. ಕರಾವಳಿ ಭದ್ರತಾ ಪಡೆಯ ಬೋಟ್‌ಗಳಲ್ಲಿ ಶಸ್ತ್ರಸಜ್ಜಿತರಾದ ಸಿಬ್ಬಂದಿ ಸಮುದ್ರದಲ್ಲಿ ಸಂಚರಿಸುತ್ತಾ ಕಾವಲು ಕೆಲಸದಲ್ಲಿ ನಿರತರಾಗಿದ್ದಾರೆ. ಮಹಾಬಲಿಪುರಂನ ಒಳಗೆ ಹಾಗೂ ಅದರ ಸುತ್ತಮುತ್ತ ಸುಮಾರು 12ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಎಲ್ಲೆಡೆ ಬಾಂಬ್ ನಿಷ್ಕ್ರಿಯ ದಳ, ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.