ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ದಿನ ಉಳಿದಿರುವ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಮಂತ್ರಿ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತಿತರ ನಾಯಕರ ಸಮ್ಮುಖದಲ್ಲಿ ಬಿಜೆಪಿ 'ಸಂಕಲ್ಪ ಪತ್ರ' ಪ್ರಣಾಳಿಕೆ ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ವಿರೋಧ ಪಕ್ಷ ಕಾಂಗ್ರೆಸ್ ಕಳೆದ ಬುಧವಾರವೇ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಒಳಿತಿಗಾಗಿ ಕೈಗೊಳ್ಳುವ ಯೋಜನೆಗಳನ್ನು ಜನತೆ ಮುಂದೆ ಪ್ರಸ್ತುತಪಡಿಸಿದೆ. 


ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ತಮ್ಮ ಪ್ರಣಾಳಿಕೆಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿವೆ. ಅವುಗಳಲ್ಲಿ ಎರಡೂ ಪಕ್ಷಗಳ ಪ್ರಣಾಳಿಕೆಯ ಪ್ರಮುಖ ವ್ಯತ್ಯಾಸಗಳು ಈ ಕೆಳಗಿನಂತಿವೆ:


1. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ, ಪ್ರತ್ಯೇಕ ರೈತ ಬಜೆಟ್ ಮಂಡಿಸುವುದಾಗಿ ಭರವಸೆ ನೀಡಿದೆ. ಆದರೆ ಬಿಜೆಪಿ 60 ವರ್ಷ ಪೂರ್ಣಗೊಂಡ ಸಣ್ಣ ಹಿಡುವಳಿದಾರರಿಗೆ ಪಿಂಚಣಿ ಮತ್ತು 2020 ರ ಹೊತ್ತಿಗೆ ರೈತರ ಆದಾಯದ ದ್ವಿಗುಣಗೊಳಿಸುವ ಭರವಸೆ ನೀಡಿದೆ.


2. ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಮಾತುಕತೆ ಮತ್ತು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆಯನ್ನು ಪರಿಶೀಲಿಸುವುದಾಗಿ ಕಾಂಗ್ರೆಸ್ ಹೇಳಿದ್ದರೆ,  ಬಿಜೆಪಿ ವಿಧಿ 370, 35 ಎ ರದ್ದುಗೊಳಿಸುವ ಭರವಸೆಯನ್ನು ಪುನರುಚ್ಛರಿಸಿದೆ.


3. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 2030ರ ವೇಳೆಗೆ ದೇಶವನ್ನು ಬಡತನ ಮುಕ್ತ ರಾಷ್ಟ್ರ ಮಾಡುವ ಉದ್ದೇಶ ಹೊಂದಿದ್ದು, 'ನಾಯ್ ಯೋಜನೆ' ಮೂಲಕ ಬಡತನ ನಿರ್ಮೂಲನೆ ಭರವಸೆ ನೀಡಿದೆ. ಮತ್ತೊಂದೆಡೆ ಬಿಜೆಪಿ  ಬಿಪಿಎಲ್ ಕುಟುಂಬಗಳ ಸಂಖ್ಯೆಯನ್ನು ಒಂದೇ ಅಂಕಿಯಕ್ಕೆ ತಗ್ಗಿಸುವುದಾಗಿ ಹೇಳಿದೆ. 


4. 2020 ರ ವೇಳೆಗೆ 22 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದರೆ, ಬಿಜೆಪಿ ತನ್ನ 'ಸಂಕಲ್ಪ ಪತ್ರ'ದಲ್ಲಿ 22 ಪ್ರಮುಖ 'ಚಾಂಪಿಯನ್ ಕ್ಷೇತ್ರ'ಗಳನ್ನು ಬಲಪಡಿಸುವ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ನೀಡಿದೆ.


5. ರಾಮ ಮಂದಿರ ಮತ್ತು ತ್ರಿವಳಿ ತಲಾಖ್ ಬಗ್ಗೆಕಾಂಗ್ರೆಸ್ ಯಾವುದೇ ಪ್ರಸ್ತಾ ಮಾಡಿಲ್ಲ. ಆದರೆ ಬಿಜೆಪಿ ತನ್ನ 'ಸಂಕಲ್ಪ ಪತ್ರ'ದಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಸುಪ್ರೀಂ ಕೋರ್ಟ್ ಆದೇಶವನ್ನು ನಿರೀಕ್ಷಿಸಲಾಗುವುದು ಹಾಗೂ ತ್ರಿವಳಿ ತಲಾಖ್ ಪದ್ಧತಿಯನ್ನು ತೊಡೆದುಹಾಕಲು ಕಾನೂನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.