ನವದೆಹಲಿ: COVID 19 ಕರೋನವೈರಸ್ (Coronavirus ನಿಯಂತ್ರಿಸಲು ಜಾರಿಗೊಳಿಸಲಾದ ನಾಲ್ಕನೇ ಹಂತದ ಲಾಕ್​ಡೌನ್ ಮೇ  31ಕ್ಕೆ ಮುಕ್ತಾಯವಾಗಲಿದೆ. ಲಾಕ್​ಡೌನ್ ನಡುವೆಯೂ ದೇಶದಲ್ಲಿ  ಕೋವಿಡ್ -19 (Covid-19) ) ಪೀಡಿತರ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿರುವುದರಿಂದ ಐದನೇ ಹಂತದ ಲಾಕ್​ಡೌನ್ ಜಾರಿ ಮಾಡಲಾಗುತ್ತೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮೇ 31ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಗ್ಗೆ ತಿಳಿಸಲಿದ್ದಾರೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಯಾರನ್ನೂ  ಕೇಳದೆ ಕೇವಲ ನಾಲ್ಕೇ ನಾಲ್ಕು ಗಂಟೆ ಮೊದಲು ಟಿವಿ ಎದುರು ಬಂದು ಲಾಕ್​ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಘೋಷಿಸಿದ್ದರು. ನಂತರದಲ್ಲಿ ಲಾಕ್​ಡೌನ್ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಗೊಂದಲ ಉಂಟಾಗಿದ್ದರಿಂದ ರಾಜ್ಯಗಳ ಅಭಿಪ್ರಾಯ ಪಡೆದಿದ್ದರು. ಈಗ ಮತ್ತೆ ರಾಜ್ಯಗಳ ಅಭಿಪ್ರಾಯ ಪಡೆಯುವ ಸಾಧ್ಯತೆಗಳು ಮತ್ತು ಮುಖ್ಯಮಂತ್ರಿಗಳ ಸಭೆ ಕರೆಯುವ ಸಾಧ್ಯತೆ ವಿರಳವಾಗಿದೆ. ಪ್ರಧಾನಿ ಮೋದಿ ನೇರವಾಗಿ ನಿರ್ಧಾರ ಪ್ರಕಟಿಸುತ್ತಾರೆ ಎನ್ನಲಾಗಿದೆ.


ಮೇ 30ಕ್ಕೆ ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷವಾಗಲಿದೆ. ಬಿಜೆಪಿ ವತಿಯಿಂದ ಅಂದು ವರ್ಷಾಚರಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಮೇ 31ರಂದು ಪ್ರಧಾನಿ ಮೋದಿ ತಮ್ಮ ರೇಡಿಯೋ ಸರಣಿ 'ಮನ್ ಕಿ ಬಾತ್'  ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾಷಣದ ವೇಳೆ ಲಾಕ್​ಡೌನ್ ವಿಸ್ತರಣೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಇದಲ್ಲದೆ ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ತಮ್ಮ ಸರ್ಕಾರ ಒಂದು ವರ್ಷ ಸಾಧಿಸಿದ್ದೇನು ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಜೊತೆಗೆ COVID 19 ವೈರಸ್ ಸೃಷ್ಟಿಸಿರುವ ಕಡುಕಷ್ಟದ ಬಗ್ಗೆ ಹೇಳಿಕೊಳ್ಳುವ ಸಾಧ್ಯತೆ ಇದೆ.