ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬೆಳಗಾವಿ ಜಿಲ್ಲೆಯ ಸೀತವ್ವ ದುಂಡಪ್ಪ ಜೋಡಟ್ಟಿ ಮತ್ತು ಮೈಸೂರಿನ  ದರ್ಶನ್ ಹೆಸರುಗಳನ್ನು ಮೋದಿ ಪ್ರಸ್ತಾಪಿಸಿದರು. 


COMMERCIAL BREAK
SCROLL TO CONTINUE READING

ಆಕಾಶವಾಣಿಯಲ್ಲಿ 40ನೇ ಆವೃತ್ತಿಯ ವರ್ಷದ ಮೊದಲ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪದ್ಮಶ್ರೀ ಪ್ರಶಸ್ತಿ ಕುರಿತು ಮಾತನಾಡಿದರು. ವಿಶೇಷ ಸಾಧನೆ ಮಾಡಿದ ಸಾಮಾನ್ಯರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯೂ ಈಗ ಬದಲಾಗಿದೆ. ಮಹಿಳಾ ಸಬಲೀಕರಣಕ್ಕೆ ಹೋರಾಡಿದ ಸೀತವ್ವ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಇದೇ ಕಾರಣಕ್ಕಾಗಿ ಅವರ ಸಾಧನೆಗೆ ಶ್ರೇಷ್ಠ ಪ್ರಶಸ್ತಿ ದೊರೆತಿದೆ ಎಂದು ಪ್ರಧಾನಿ ತಿಳಿಸಿದರು.


ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಸೀತವ್ವ ದುಂಡಪ್ಪ ಜೋಡಟ್ಟಿ (43) ಕೂಲಿ ಕೆಲಸ ಮಾಡಿಕೊಂಡು ನಂತರ ದೇವದಾಸಿ ಪದ್ಧತಿಗೆ ಆಹಾರವಾಗಿದ್ದವರು. ಆದರೆ ಇದರಿಂದ ಮನನೊಂದು 1997ರಲ್ಲಿ ಜಿಲ್ಲೆಯ ದೇವದಾಸಿಯರೊಂದಿಗೆ ಒಟ್ಟುಗೂಡಿ ಮಹಿಳಾ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಂಸ್ಥೆ (ಮಾಸ್)ಯನ್ನು ಘಟಪ್ರಭಾದಲ್ಲಿ ಸ್ಥಾಪಿಸಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ ಮಹಿಳಾ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಸಕ್ರಿಯ ಹೋರಾಟದಲ್ಲಿ ತೊಡಗಿದ್ದಾರೆ. 


ಇನ್ನು, ಮೈಸೂರಿನ ದರ್ಶನ್‌ ಎನ್ನುವವರು ಜನೌಷಧಿಯಲ್ಲಿ ಔಷಧಿ ಖರೀದಿಸಿದರೆ ಎಷ್ಟು ಉಳಿತಾಯ ಆಗುತ್ತಿದೆ ಎಂಬುದರ ಬಗ್ಗೆ ಪತ್ರ ಬರೆದಿರುವ ಕುರಿತು ಮಾತನಾಡಿದ ಮೋದಿ ಅವರು, ತನ್ನ ತಂದೆಯ ಚಿಕಿತ್ಸೆಯ ಔಷಧಗಳಿಗಾಗಿ ತಿಂಗಳಿಗೆ ಸುಮಾರು 6 ಸಾವಿರ ರೂ.ಗಳನ್ನು ಖರ್ಚು ಮಾಡುತ್ತಿದ್ದ ದರ್ಶನ್‌, ಪ್ರಧಾನಮಂತ್ರಿ ಜನೌಷಧ ಯೋಜನೆಯಿಂದಾಗಿ ಆತನ ಖರ್ಚಿನಲ್ಲಿ ಶೇ. 75ರಷ್ಟು ಕಡಿತ ಕಂಡಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆ ಜನರನ್ನು ತಲುಪಿ ಉತ್ತಮ ಆರೋಗ್ಯ ಪಡೆದು, ಜೀವನ ಸಾಗಿಸುವಂತಾಗಬಹುದು ಎಂದು ತಿಳಿಸಿದರು.