ನವದೆಹಲಿ: ಮುಂಬೈ ಮೆಟ್ರೊ ರೈಲು ನಿಗಮದ ಉದ್ದೇಶಿತ ಮೆಟ್ರೊ-3ನೇ ಹಂತದ ಕಾರ್‌ ಶೆಡ್ ನಿರ್ಮಾಣ ಕಾಮಗಾರಿಗೆ ಬಲಿಯಾಗುತ್ತಿ‌ದ್ದ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಆದೇಶಿಸಿ ಸುಪ್ರೀಂಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ. 


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಮುಂದಿನ ವಿಚಾರಣೆಯನ್ನು ಅ.21ಕ್ಕೆ ನಡೆಸುವುದಾಗಿ ತಿಳಿಸಿದೆ. 


ಮರಗಳನ್ನು ಕಡಿಯುವುದರ ವಿರುದ್ಧ ಕಾನೂನು ವಿದ್ಯಾರ್ಥಿಗಳ ಗುಂಪೊಂದು ನ್ಯಾಯಾಲಯಕ್ಕೆ ಬರೆದ ಪತ್ರದ ಆಧಾರದ ಮೇಲೆ ದಾಖಲಾದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಲಯ ಮರಗಳ ಹನನ ಮಾಡದಂತೆ ನಿರ್ದೇಶನ ಜಾರಿಗೊಳಿಸಿತು. 


ಇದೇ ವೇಳೆ ಆರೆ ಕಾಲೋನಿಯಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ಭರವಸೆ ನೀಡಿದ್ದು, ಮುಂಬೈ ಮೆಟ್ರೋ ರೈಲು ನಿಗಮ ಲಿಮಿಟೆಡ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಬಂಧನಕ್ಕೊಳಗಾದ ಜನರನ್ನು ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಇನ್ನೂ ಕೆಲವರ ಬಿಡುಗಡೆಯಾಗದಿದ್ದಲ್ಲಿ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿದರು.


ಮುಂಬೈಯ ಆರೇ ಕಾಲೋನಿ ವ್ಯಾಪ್ತಿಯಲ್ಲಿ ಜಾರಿಗೊಳ್ಳಲಿರುವ ಮೆಟ್ರೋ ಕಾಮಗಾರಿಗಾಗಿ 2,600 ಮರಗಳನ್ನು ಕತ್ತರಿಸಲು ಮಹಾರಾಷ್ಟ್ರ ಸರಕಾರ ಯೋಜನೆ ಸಿದ್ದಪಡಿಸಿ ಮರಗಳನ್ನು ಕಡಿಯಲು ಆರಂಭಿಸಿತ್ತು. ಆದರೆ ಮರಗಳನ್ನು ಉಳಿಸುವಂತೆ ಪರಿಸರ ಪ್ರೇಮಿಗಳು ಪ್ರತಿಭಟನಾಕಾರರು ಹೋರಾಟ ನಡೆಸಿದ್ದರಲ್ಲದೆ, ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಮರ ಕಡಿಯದಂತೆ ಅದೇಶಿಸಿದೆ.