ಗೋವಾದ 10ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನೆಹರು ಬದಲಿಗೆ ಸಾವರ್ಕರ್ ಚಿತ್ರ; NSUI ಆಕ್ಷೇಪ
ಪಠ್ಯ ಪುಸ್ತಕದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಭಾವಚಿತ್ರವನ್ನು ತೆಗೆದು ಬದಲಿಗೆ ಸಾವರ್ಕರ್ ಅವರ ಭಾವಚಿತ್ರವನ್ನು ಸೇರಿಸಿರುವುದು ವಿಷಾದದ ಸಂಗತಿ-NSUI ಗೋವಾ ಮುಖ್ಯಸ್ಥ
ಪಣಜಿ: ಗೋವಾದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಭಾವಚಿತ್ರವನ್ನು ಕೈಬಿಟ್ಟು ಬದಲಿಗೆ ವಿನಾಯಕ ದಾಮೋದರ್ ಸಾವರ್ಕರ್ ಅವರ ಭಾವಚಿತ್ರವನ್ನು ಸೇರಿಸಲಾಗಿದೆ. ಇದಕ್ಕೆ NSUI ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.
ಪಠ್ಯ ಪುಸ್ತಕದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಭಾವಚಿತ್ರವನ್ನು ತೆಗೆದು ಬದಲಿಗೆ ಸಾವರ್ಕರ್ ಅವರ ಭಾವಚಿತ್ರವನ್ನು ಸೇರಿಸಿರುವುದು ವಿಷಾದದ ಸಂಗತಿ ಎಂದು NSUI ನ ಗೋವಾ ಮುಖ್ಯಸ್ಥ ಅಹ್ರಾಝ್ ಮುಲ್ಲಾ ಬೇಸರ ವ್ಯಕ್ತಪಡಿಸಿದ್ದು, ಇದು ಚರಿತ್ರೆಯನ್ನು ಬದಲಾಯಿಸುವ ಮತ್ತು ಸ್ವಾತಂತ್ರ ಹೋರಾಟಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಮರೆ ಮಾಚುವ ಬಿಜೆಪಿ ತಂತ್ರವಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
'ಇಂಡಿಯಾ ಅಂಡ್ ಕಾಂಟೆಂಪರರಿ ವರ್ಲ್ಡ್ ಪಾರ್ಟ್ -2 (ಡೆಮಾಕ್ರಟಿಕ್ ಪಾಲಿಟಿಕ್ಸ್)' ಎಂಬ ಪುಸ್ತಕವು ಇತಿಹಾಸ ಮತ್ತು ರಾಜಕೀಯ ವಿಜ್ಞಾನದ ಪಠ್ಯಪುಸ್ತಕವಾಗಿದೆ. ಗೋವಾದಲ್ಲಿ 10 ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿದೆ.
ನೆಹರೂ, ಮಹಾತ್ಮ ಗಾಂಧಿ ಮತ್ತು ಮೌಲಾನಾ ಆಜಾದ್ರ ಚಿತ್ರವನ್ನು ಮಹಾರಾಷ್ಟ್ರದ ವಾರ್ಧಾದ ಸೆವೆನ್ಗ್ರಾಮ್ ಆಶ್ರಮದಲ್ಲಿ 1935 ರಲ್ಲಿ ಮುದ್ರಿಸಲಾಯಿತು. ಇದು ಕಳೆದ ಶೈಕ್ಷಣಿಕ ವರ್ಷದಲ್ಲಿ 68 ನೇ ಪುಟದಲ್ಲಿ ಪಠ್ಯಕ್ರಮದ ಭಾಗವಾಗಿತ್ತು. ಈ ಪುಸ್ತಕದ ಹೊಸ ಆವೃತ್ತಿಯಲ್ಲಿ ನೆಹರು ಅವರ ಚಿತ್ರ ತೆಗೆಯಲಾಗಿದೆ ಮತ್ತು ಅದೇ ಪುಸ್ತಕದ ಪ್ರಸ್ತುತ ಆವೃತ್ತಿಯಲ್ಲಿ, ಅದೇ ಪುಟದಲ್ಲಿ ನೆಹರೂ ಬದಲಿಗೆ ಸಾವರ್ಕರ್ ಚಿತ್ರವನ್ನು ಮುದ್ರಿಸಲಾಗಿದೆ ಎಂದು ಅಹ್ರಾಝ್ ಮುಲ್ಲಾ ಹೇಳಿದ್ದಾರೆ.