ದೇಶದ ಪ್ರಧಾನಿಯನ್ನೂ ಬಿಡದ ಕಾಲ್ ಡ್ರಾಪ್ ಸಮಸ್ಯೆ!
ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಹಿಡಿಯುವಂತೆ ಟೆಲಿಕಾಂ ವಲಯಕ್ಕೆ ಪ್ರಧಾನಿ ಮೋದಿ ಸಲಹೆ.
ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಈ ಕರೆ ಕಡಿತ ಅಥವಾ ಕಾಲ್ ಡ್ರಾಪ್ ಸಮಸ್ಯೆ ಕೇವಲ ನಮ್ಮ-ನಿಮ್ಮ ಸಮಸ್ಯೆ ಮಾತ್ರವಲ್ಲ. ದೇಶದ ಪ್ರಧಾನಿಯವರನ್ನೂ ಬಿಟ್ಟಿಲ್ಲ ಈ ಸಮಸ್ಯೆ. ಹೌದು, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೂ ಬಿಡದೆ ಕಾಡಿದೆ ಈ ಕಾಲ್ ಡ್ರಾಪ್ ಸಮಸ್ಯೆ.
ತಮಗೆ ಎದುರಾಗಿರುವ ಸವಾಲಿನ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಈ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಹಿಡಿಯುವಂತೆ ದೂರಸಂಪರ್ಕ ಇಲಾಖೆಗೆ ಸಲಹೆ ನೀಡಿದ್ದಾರೆ. ಟೆಲಿಕಾಂ ಸೇವಾ ಕಂಪನಿಗಳು ತಮ್ಮ ಗ್ರಾಹಕರಿಗೆ ಉನ್ನತ ಮಟ್ಟದ ತೃಪ್ತಿಯಾಗುವಂತೆ ಸೇವೆ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಪ್ರಧಾನಿ ಪ್ರಗತಿ ಅವಲೋಕನ ಸಭೆಯನ್ನು ನಡೆಸುತ್ತಿದ್ದಾಗ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಿಂದ ಅಧಿಕೃತ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಕರೆ ಪೂರ್ಣಗೊಳಿಸುವಲ್ಲಿ ಎದುರಿಸಿದ ಸವಾಲಿನ ಬಗ್ಗೆ ತಿಳಿಸಿದ್ದಾರೆ. ಕರೆ ಕಡಿತದ ಬಗ್ಗೆ ಗ್ರಾಹಕರಿಂದ ಇಲಾಖೆಗೆ ಹರಿದುಬರುತ್ತಿರುವ ದೂರುಗಳ ಬಗ್ಗೆ ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರರಾಜನ ವಿವರಗಳನ್ನು ನೀಡಿದಾಗ ಮೋದಿ ಸ್ವತಃ ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವವರು ಕರ್ ಮಾಡಲು ಹೇಗೆ ಪ್ರಯತ್ನಿಸುತ್ತಾರೆ ಎನ್ನುವುದನ್ನು ಬಣ್ಣಿಸಿದ ಮೋದಿ, ಕಾಲ್ ಡ್ರಾಪ್ ಸಮಸ್ಯೆ ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. ಇದಕ್ಕೆ ತಕ್ಷಣ ಸೂಕ್ತ ಪರಿಹಾರ ಕಂಡು ಹಿಡಿಯಿರಿ ಎಂದು ಅಧಿಕಾರಿಗಳಿ ಪ್ರಧಾನಿ ಮೋದಿ ಸೂಚನೆ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.