ವೈನಾಡು: ವೈನಾಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೇರಳದ ತಿರುನೆಲ್ಲಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ವಂಶದ ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.


COMMERCIAL BREAK
SCROLL TO CONTINUE READING

ಪೂಜೆ ವೇಳೆ ರಾಹುಲ್ ಗಾಂಧಿಗೆ ಸಾಥ್​ ನೀಡಿದ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ. ಸಿ. ವೇಣುಗೋಪಾಲ್​​, ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಕೂಡ ರಾಹುಲ್ ಗಾಂಧಿ ಅವರು ಇಲ್ಲಿಗೆ ಬರಬೇಕು ಎಂದುಕೊಂಡಿದ್ದರು. ಆದರೆ ಭದ್ರತಾ ನಿರ್ಬಂಧನೆಗಳ ಕಾರಣ ಬರಲು ಆಗಿರಲಿಲ್ಲ. ಇಲ್ಲಿನ ಪಾಪನಾಶಿನಿ ನದಿಯಲ್ಲೇ ರಾಜೀವ್​ ಗಾಂಧಿ ಅವರ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ ಎಂದು ವೇಣುಗೋಪಾಲ್ ಹೇಳಿದರು.



ಪೂಜಾರಿಯ ನಿರ್ದೇಶನದಂತೆ ರಾಹುಲ್ ಗಾಂಧಿ ತಮ್ಮ ಅಜ್ಜಿ(ಇಂದಿರಾ ಗಾಂಧಿ), ತಂದೆ ಹಾಗೂ ಇತರ ಹಿರಿಯರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ಪೂಜೆ ಸಲ್ಲಿಸಿದರು. ಬಳಿಕ ಕೇರಳದ ಅಲ್ಲಪ್ಪುಜಾ, ತಿರುವನಂತಪುರಂ​​ನಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.



ಉತ್ತರಪ್ರದೇಶದ ಅಮೇಥಿಯಲ್ಲಿ ಸದಾ ಚುನಾವಣೆಗೆ ಸ್ಪರ್ಧಿಸುತ್ತಿದ್ದ ರಾಹುಲ್ ಈ ಬಾರಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಐ.ಶಾನವಾಜ್ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಹುಲ್ ಸ್ಪರ್ಧಿಸುತ್ತಿದ್ದಾರೆ.