ನವದೆಹಲಿ: ಮೊದಲೇ ಕುಸಿದಿದ್ದ ದೇಶದ ಆರ್ಥಿಕತೆ ಕೊರೋನಾ ಮತ್ತು  ಲಾಕ್​ಡೌನ್ ಸಂಕಷ್ಟಕ್ಕೆ ಸಿಲುಕಿ ಪಾತಾಳಮುಖಿಯಾಗಿತ್ತು. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್  (RBI) ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಿದೆ. ಅಲ್ಲದೆ ಮಧ್ಯಮ ವರ್ಗದ ಹಿತಕಾಯಲು  EMI ಪಾವತಿಗೆ ಇನ್ನೂ ಮೂರು ತಿಂಗಳು ಸಮಯಾವಕಾಶ ನೀಡಿದೆ.


COMMERCIAL BREAK
SCROLL TO CONTINUE READING

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ ಗೌವರ್ನರ್ ರೆಪೋ ದರ ಕಡಿತ ಮತ್ತು EMI ಪಾವತಿಗೆ ಸಮಯಾವಕಾಶ ವಿಸ್ತರಣೆಯನ್ನು ಪ್ರಕಟಿಸಿದರು. ಕೊರೋನಾ ಮತ್ತು  ಲಾಕ್​ಡೌನ್ (Lockdown)  ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್, ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಟಿ ನೀಡಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.


ಆರ್ಥಿಕತೆಗೆ ಉತ್ತೇಜನ ನೀಡಲು ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಲಾಗಿದೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಶೇಕಡಾ 4.4ರಷ್ಟಿದ್ದ ರೆಪೋ ದರವನ್ನು ಶೇಕಡಾ 4ಕ್ಕೆ ಇಳಿಕೆ ಮಾಡಲಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇಕಡಾ 3.35ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.


ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೇಪೋ ದರ ಎನ್ನಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಹಣಕ್ಕೆ ಆರ್​ಬಿಐ ನೀಡುವ ಬಡ್ಡಿ ದರವನ್ನು ರಿವರ್ಸ್ ರೆಪೋ ದರ ಎನ್ನಲಾಗುತ್ತದೆ. ಶಕ್ತಿಕಾಂತ್ ದಾಸ್ ಈ ಎರಡೂ ದರಗಳನ್ನು ಈಗ ಇಳಿಕೆ ಮಾಡಿದ್ದಾರೆ.


ಮಧ್ಯಮ ವರ್ಗಕ್ಕೆ ಲಾಕ್ಡೌನ್ ಘೋಷಣೆಯಾದ ಬಳಿಕ ಸಾಲದ ಕಂತುಗಳನ್ನು ಕಟ್ಟುವುದು ಕಷ್ಟ ಆಗಿತ್ತು. ಈ ಹಿನ್ನೆಲೆಯಲ್ಲಿ ಸಾಲದ ಕಂತು ಪಾವತಿಯನ್ನು ಮೂರು ತಿಂಗಳ ಮಟ್ಟಿಗೆ ಮುಂದೂಡಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಮೂರು ತಿಂಗಳು ಮುಂದೂಡಿದೆ‌. ಮಧ್ಯಮ ವರ್ಗದ ಹಿತದೃಷ್ಟಿಯಿಂದ ಹಾಗೂ ಸಣ್ಣ ಉದ್ಯಮಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.


ಕೊರೋನಾ  ಕೋವಿಡ್ -19 (Covid-19) ಕಾರಣಕ್ಕೆ ಇಡೀ ಜಗತ್ತಿನ ಅರ್ಥ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಶಕ್ತಿಕಾಂತ್ ದಾಸ್, ಭಾರತವೂ ಕೂಡ ಹೊರತಾಗಿಲ್ಲ‌. ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆಮೀರಿ ತೀರಾ ಸಂಕಷ್ಟಕ್ಕೆ ಸಿಲುಕಿದೆ.‌ ಆಮದು, ರಫ್ತು, ಉತ್ಪಾದನೆಗಳೆಲ್ಲವೂ ಕುಸಿದಿವೆ ಎಂದರು.


ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆ ಶೇಕಡಾ 17ರಷ್ಟು ಕುಸಿದಿದ್ದರೂ ಕೃಷಿ ಕ್ಷೇತ್ರದಲ್ಲಿ ಮಾತ್ರ ಚೇತರಿಕೆ ಕಂಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಆಶಾದಾಯಕವಾಗಿದೆ. ಇದರಿಂದ ಮುಂದೆಯೂ ಆಹಾರದ ಸಮಸ್ಯೆ ಉದ್ಭವಿಸುವುದಿಲ್ಲ. ರಫ್ತು ಮತ್ತು ಬೇಡಿಕೆ ಕಡಿಮೆ ಆಗಿರುವುದರಿಂದ ಒಚ್ಛಾ ತೈಲದ ಬೆಲೆ ಕಡಿಮೆಯಾಗಿದೆ. ಇದು ಸಹಜವಾಗಿ ಹಣದ ಹರಿವಿನ ಮೇಲೆ ಪರಿಣಾಮ ಬೀರಿದೆ ಎಂದರು.


ಇದು ಕೊರೋನಾ ಕಷ್ಟ ಬಂದೊದಗಿದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನಡೆಸಿದ ಮೂರನೇ ಪತ್ರಿಕಾಗೋಷ್ಠಿ ಮತ್ತು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಳಿಕ  ನಡೆಸಿದ ಮೊದಲ ಪತ್ರಿಕಾಗೋಷ್ಠಿಯಾಗಿತ್ತು.