ಮೋದಿ ಸರ್ಕಾರದ ನೀತಿಗಳ ಮೇಲೆ ಆರ್‌ಎಸ್‌ಎಸ್ ಪ್ರಭಾವವಿಲ್ಲ: ಮೋಹನ್ ಭಾಗವತ್
ನಾವು ಕೇಂದ್ರ ರಾಜಕಾರಣದ ಮೇಲಾಗಲೀ ಅಥವಾ ಆಡಳಿತ ಸರಕಾರದ ನೀತಿಗಳ ಮೇಲಾಗಲೀ ಯಾವುದೇ ಪ್ರಭಾವ ಬೀರುತ್ತಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿ: ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿ-ನಿಯಮಗಳ ಮೇಲೆ ಆರ್‌ಎಸ್‌ಎಸ್ ನ ಯಾವುದೇ ಪ್ರಭಾವವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ನ ರಾಷ್ಟ ಮಟ್ಟದ ಮೂರು ದಿನಗಳ 'ಭವಿಷ್ಯ ಕಾ ಭಾರತ್' ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ರಾಜಕಾರಣದ ಮೇಲಾಗಲೀ ಅಥವಾ ಆಡಳಿತ ಸರಕಾರದ ನೀತಿಗಳ ಮೇಲಾಗಲೀ ಯಾವುದೇ ಪ್ರಭಾವ ಬೀರುತ್ತಿಲ್ಲ. ಆದರೆ, ಸರ್ಕಾರಕ್ಕೆ ಯಾವುದೇ ಸಲಹೆಯ ಅಗತ್ಯವಿದ್ದರೆ ಮಾತ್ರ ನಾವು ನೀಡುತ್ತೇವೆ. ಇದನ್ನು ಹೊರತುಪಡಿಸಿ ಸರ್ಕಾರ ತನ್ನ ಕಾರ್ಯ ನಿರ್ವಹಿಸುವಲ್ಲಿ ಸಮರ್ಥವಾಗಿದೆ ಎಂದು ಹೇಳಿದರು.
ಈ ಮೂರು ದಿನಗಳ ಸಮ್ಮೆಳನದ ಮುಖ್ಯ ಉದ್ದೇಶವೆಂದರೆ, ದೇಶದ ಭವಿಷ್ಯದ ಬಗ್ಗೆ ಅದರ ದೃಷ್ಟಿಕೋನವನ್ನು ಪ್ರಸ್ತುತಪಡಿಸುವುದು ಮತ್ತು ಸಂಘಟನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ ಎಂದು ಭಾಗವತ್ ಹೇಳಿದರು.