ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಬೆನ್ನಲ್ಲೇ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಸೋಮವಾರ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ನೀಡಿದೆ. 


COMMERCIAL BREAK
SCROLL TO CONTINUE READING

ಕಾಂಗ್ರೆಸ್ ನಾಯಕ ವಿಶ್ವನಾಥ್ ಚತುರ್ವೇದಿ ಅವರು, ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸ್ಥಿತಿಗತಿಗಳ ವರದಿಯನ್ನು ನೀಡಬೇಕೆಂದು ಸಿಬಿಐ ಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜಾನ್ ಗೊಗೋಯ್ ನೇತೃತ್ವದ ಪೀಠ ಎರಡು ವಾರಗಳೊಳಗೆ ತನಿಖೆಯ ಸ್ಥಿತಿಗತಿಗಳ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. 


ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿತ್ತು. 2007ರಲ್ಲಿ ಈ ನಾಯಕರ ಅಕ್ರಮ ಆಸ್ತಿ ಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಕಾಂಗ್ರೆಸ್ ನಾಯಕ ವಿಶ್ವನಾಥ್ ಚತುರ್ವೇದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇರೆಗೆ ಈ ತನಿಖೆಗೆ ಆದೇಶಿಸಲಾಗಿತ್ತು.