ಬಹು ಅಂಗಾಂಗ ವೈಫಲ್ಯದಿಂದ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ನಿಧನ
71 ವರ್ಷದ ಅಹ್ಮದ್ ಪಟೇಲ್ ಕಳೆದ ತಿಂಗಳು ಕರೋನಾವೈರಸ್ ಪಾಸಿಟಿವ್ ಆದ ಬಳಿಕ ಚಿಕಿತ್ಸೆಗೆ ಒಳಗಾಗಿದ್ದರು. ಅಕ್ಟೋಬರ್ 1 ರಂದು ಮಾಡಿದ ಟ್ವೀಟ್‌ನಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಸ್ವಯಂ ಪ್ರತ್ಯೇಕಿಸಲು ವಿನಂತಿಸಿದ್ದರು.
ನವದೆಹಲಿ: ತಿಂಗಳ ಹಿಂದಷ್ಟೇ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ರಾಜ್ಯಸಭಾ ಸದಸ್ಯ, ಎಐಸಿಸಿ ಖಜಾಂಜಿ ಅಹ್ಮದ್ ಪಟೇಲ್ (Ahmed Patel) ಅವರು ಅನೇಕ ಅಂಗಾಂಗ ವೈಫಲ್ಯಗಳಿಂದಾಗಿ ಬುಧವಾರ ಮುಂಜಾನೆ ನಿಧನರಾಗಿದ್ದಾರೆ.
ಈ ಬಗ್ಗೆ ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಅಹ್ಮದ್ ಪಟೇಲ್ ಪುತ್ರ ಫೈಸಲ್ ಪಟೇಲ್, ನನ್ನ ತಂದೆ ಅಹ್ಮದ್ ಪಟೇಲ್ ಅವರು ಇಂದು(25/11/2020) ಮುಂಜಾನೆ 3: 30 ಕ್ಕೆ ಅಕಾಲಿಕ ನಿಧನರಾದರು ಎಂದು ಘೋಷಿಸಲು ವಿಷಾದಿಸುತ್ತೇನೆ. ಒಂದು ತಿಂಗಳ ಹಿಂದೆಯೇ ಕೋವಿಡ್ -19 (Covid 19) ಸೋಂಕಿಗೆ ತುತ್ತಾಗಿದ್ದ ನಂತರ ಅಂಗಾಂಗ ವೈಫಲ್ಯಗಳಿಂದಾಗಿ ನನ್ನ ತಂದೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತು ಎಂದಿದ್ದಾರೆ. ಇದೇ ವೇಳೆ ಕೋವಿಡ್ -19 ನಿಯಮಗಳನ್ನು ಪಾಲಿಸಬೇಕೆಂದು ನಾನು ಎಲ್ಲ ಹಿತೈಷಿಗಳನ್ನು ವಿನಂತಿಸುತ್ತೇನೆ ಮತ್ತು ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಫೈಸಲ್ ಪಟೇಲ್ ಎಲ್ಲರನ್ನೂ ವಿನಂತಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹಮದ್ ಪಟೇಲ್ ಐಸಿಯುಗೆ ದಾಖಲು
71 ವರ್ಷದ ಅಹ್ಮದ್ ಪಟೇಲ್ ಅಕ್ಟೋಬರ್ 1 ರಂದು ಮಾಡಿದ ಟ್ವೀಟ್‌ನಲ್ಲಿ ತಾವು ಕರೋನಾವೈರಸ್ ಪಾಸಿಟಿವ್ ಆಗಿದ್ದು ಇತ್ತೀಚಿಗೆ ತನ್ನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಸ್ವಯಂ ಪ್ರತ್ಯೇಕಿಸಲು ವಿನಂತಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನವೆಂಬರ್ 15 ರಂದು ಗುರುಗ್ರಾಮ್‌ನ ಮೆಡಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು.
ಗುಜರಾತ್‌ನ ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ (Congress) ಖಜಾಂಚಿಯಾಗಿರುವ ಪಟೇಲ್ ಎಂಟು ಬಾರಿ ಸಂಸದರಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದ ಹಂಗಾಮಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದರು.
ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರ ನಿಧನದ ಎರಡು ದಿನಗಳ ನಂತರ ಪಟೇಲ್ ಸಾವು ಸಂಭವಿಸಿದೆ. ಪ್ರಾಸಂಗಿಕವಾಗಿ 84 ವರ್ಷದ ಗೊಗೊಯ್ ಕೂಡ ಆಗಸ್ಟ್ನಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ನವೆಂಬರ್ 2 ರಂದು ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.