Swiggy: ಗ್ರಾಹಕನಿಗೆ 4 ರೂ. ಹೆಚ್ಚುವರಿ GST ಹಾಕಿದ್ದಕ್ಕೆ ಸ್ವಿಗ್ಗಿಗೆ 20 ಸಾವಿರ ರೂ. ದಂಡ..!
ಎಂಆರ್ಪಿ ಬೆಲೆ ಪಾವತಿಸಿದ್ದರೂ 4.50 ರೂ. ಹೆಚ್ಚುವರಿ ಜಿಎಸ್ಟಿ ವಿಧಿಸಿರುವುದು ಅಭಿಷೇಕ್ ಗರ್ಗ್ ಕಣ್ಣು ಕೆಂಪಗಾಗಿಸಿತ್ತು.
ನವದೆಹಲಿ: ಗ್ರಾಹಕರೊಬ್ಬರಿಗೆ ತಂಪು ಪಾನೀಯಕ್ಕೆ 4.50 ರೂ. ಹೆಚ್ಚುವರಿ ಜಿಎಸ್ಟಿ(GST) ವಿಧಿಸಿದ ಕಾರಣಕ್ಕೆ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ(Food Delivery App) ಸ್ವಿಗ್ಗಿಗೆ 20 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.
2018ರಲ್ಲಿ ಹರಿಯಾಣ(Haryana)ದ ಪಂಚಕುಲ ಮೂಲದ ಅಭಿಷೇಕ್ ಗರ್ಗ್ ಎಂಬುವರು 144 ರೂ. ಮೌಲ್ಯದ ಗಾರ್ಲಿಕ್ ಬ್ರೆಡ್ ಮತ್ತು 90 ರೂ. ಮೌಲ್ಯದ 3 ತಂಪು ಪಾನೀಯಗಳನ್ನು ಸ್ವಿಗ್ಗಿ(Swiggy) ಮೊಬೈಲ್ ಆ್ಯಪ್ ಮೂಲಕ ಆರ್ಡರ್ ಮಾಡಿದ್ದರು. ಆರ್ಡರ್ ಸ್ವೀಕರಿಸಿದ್ದ ಗರ್ಗ್ ಅವರಿಗೆ ತಂಪು ಪಾನೀಯಗಳಿಗೆ ಹೆಚ್ಚುವರಿಯಾಗಿ 4.50 ರೂ. ಜಿಎಸ್ಟಿ ವಿಧಿಸಿರುವುದು ತಿಳಿದುಬಂದಿತ್ತು. ಈಗಾಗಲೇ ತಾನು ತಂಪು ಪಾನೀಯಕ್ಕೆ ಎಂಆರ್ಪಿ ಬೆಲೆ ಪಾವತಿಸಿದ್ದೇನೆ. ಆದರೂ ಸ್ವಿಗ್ಗಿಯವರು ಹೆಚ್ಚುವರಿಯಾಗಿ 4.50 ರೂ. ಜಿಎಸ್ಟಿ ವಿಧಿಸಿರುವುದು ಗರ್ಗ್ ಅವರ ಕಣ್ಣು ಕೆಂಪಗಾಗಿಸಿತ್ತು.
ಇದನ್ನೂ ಓದಿ: Indian Book Of Records: ಅತ್ಯಂತ ಉದ್ದದ ನಾಲಿಗೆ ಹೊಂದಿರುವ ಈ ಯುವಕ ಏನೇನು ಮಾಡ್ತಾನೆ ಗೊತ್ತಾ..?
ಸ್ವಿಗ್ಗಿ ವಿರುದ್ಧ ಕಾನೂನು ಹೋರಾಟ ಮಾಡಲೇಬೇಕೆಂದು ನಿರ್ಧರಿಸಿದ ಗರ್ಗ್ ಕಂಪನಿ ವಿರುದ್ಧ ಗ್ರಾಹಕ ಸರಕುಗಳ(ಉತ್ಪಾದನಾ ವೆಚ್ಚ ಕಡ್ಡಾಯ ಮುದ್ರಣ ಮತ್ತು ಗರಿಷ್ಠ ಚಿಲ್ಲರೆ ಬೆಲೆ) ಕಾಯ್ದೆ 2006ರಡಿ ಪ್ರಕರಣ ದಾಖಲಿಸಿಯೇಬಿಟ್ಟರು. ಆದರೆ ಸ್ವಿಗ್ಗಿ ತಾನು ವಿಧಿಸಿರುವ ಜಿಎಸ್ಟಿ(GST) ಕ್ರಮವನ್ನು ಸಮರ್ಥಿಸಿಕೊಂಡು ಸಬೂಬು ನೀಡಿತ್ತು. ಗ್ರಾಹಕ ಮತ್ತು ಆಹಾರ ವಿತರಕರ ನಡುವೆ ತಾನು ಮಧ್ಯವರ್ತಿಯಾಗಿ ಕೆಲಸ ಮಾಡುತ್ತೇನೆ. ವ್ಯಾಪಾರಿಗಳು ಮಾತ್ರ ಬಿಲ್ನಲ್ಲಿ ಅನ್ವಯಿಸುವ ಎಲ್ಲ ತೆರಿಗೆಗಳನ್ನು ವಿಧಿಸುತ್ತಾರೆ. ನಾವು ಗ್ರಾಹಕರಿಗೆ ಆಹಾರ ನೀಡಿ ಹಣ ಸಂಗ್ರಹಿಸುವ ಕೆಲಸವನ್ನಷ್ಟೇ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿತ್ತು.
ಆದರೆ ಪಂಚಕುಲದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಸ್ವಿಗ್ಗಿಯ ಸಮರ್ಥನೆಯನ್ನು ತಳ್ಳಿಹಾಕಿತ್ತು. ಸ್ವಿಗ್ಗಿ(Swiggy) ತನ್ನ ಗ್ರಾಹಕರಿಗೆ ಅನಪೇಕ್ಷಿತ ಸೇವೆ ಒದಗಿಸುತ್ತಿದೆ ಎಂದು ಛೀಮಾರಿ ಹಾಕಿತ್ತು. ಅಲ್ಲದೇ ಸ್ವಿಗ್ಗಿ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಆಗಿದ್ದು, ಗ್ರಾಹಕರ ಆರ್ಡರ್ ಸಂಗ್ರಹಿಸಿ ಅದನ್ನು ವಿತರಿಸಲು ಸಂಬಂಧಪಟ್ಟ ಮಾರಾಟಗಾರರಿಗೆ ಕಳುಹಿಸುತ್ತದೆ. ಹೀಗೆ ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಕೊಂಡಿಯಾಗಿ ಸ್ವಿಗ್ಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಗ್ರಾಹಕರಿಗೆ ಹೆಚ್ಚುವರಿ ಮೊತ್ತ ವಿಧಿಸುವುದು ತಪ್ಪು ಎಂದು ಹೇಳಿತ್ತು.
ಇದನ್ನೂ ಓದಿ: Fake Aadhaar Card: ನಿಮ್ಮ ಆಧಾರ್ ಕಾರ್ಡ್ ಅಸಲಿಯೇ/ನಕಲಿಯೇ? ಈ ರೀತಿ ಪರಿಶೀಲಿಸಿ
ಈ ಪ್ರಕರಣದಲ್ಲಿ ಗ್ರಾಹಕರೊಂದಿಗೆ ಸ್ವಿಗ್ಗಿ(Swiggy) ನ್ಯಾಯಯುತವಾಗಿ ನಡೆದುಕೊಂಡಿಲ್ಲದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ದೂರು ಸಲ್ಲಿಸಿದ ದಿನದಿಂದ ಅದನ್ನು ಪಾವತಿಸುವ ದಿನದವರೆಗೂ ವಾರ್ಷಿಕ ಶೇ.9ರಷ್ಟು ಬಡ್ಡಿಯೊಂದಿಗೆ ಗ್ರಾಹಕ(ಅಭಿಷೇಕ್ ಗರ್ಗ್)ರಿಗೆ 4.50 ರೂ. ಮರುಪಾವತಿಸುವಂತೆ ನಿರ್ದೇಶಿಸಿತ್ತು. ಮಾನಸಿಕ ಹಿಂಸೆ, ಕಿರುಕುಳ ನೀಡಿದ್ದಕ್ಕೆ ಮತ್ತು ದಾವೆ ಶುಲ್ಕವಾಗಿ ಗರ್ಗ್ ಅವರಿಗೆ 10 ಸಾವಿರ ರೂ. ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ 10 ಸಾವಿರ ರೂ.ವನ್ನು ಹರಿಯಾಣದ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಖಾತೆಗೆ ಜಮಾ ಮಾಡುವಂತೆ ಸ್ವಿಗ್ಗಿಗೆ ತಾಕೀತು ಮಾಡಿದೆ. ಹೀಗಾಗಿ ಬೇರೆ ದಾರಿಯಿಲ್ಲದ ಕಾರಣ ಸ್ವಿಗ್ಗಿ 20 ಸಾವಿರ ರೂ. ದಂಡ ಪಾವತಿಸುವಂತಾಗಿದೆ.
ಸ್ವಿಗ್ಗಿ, ಜೊಮೊಟೊ(Zomato)ದಂತಹ ಆಹಾರ ವಿತರಣಾ ಸಂಸ್ಥೆಗಳ ವಿವಾದ ಇದೇ ಮೊದಲೇನಲ್ಲ. ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ತಡವಾಗಿ ಆರ್ಡರ್ ವಿತರಿಸಿದ್ದಾರೆಂದು ಡೆಲೆವರಿ ಬಾಯ್ ಮೇಲೆ ಅನೇಕ ಬಾರಿ ಹಲ್ಲೆ ನಡೆಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲಿರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.