ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿ ಕುರಿತು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಎರಡು ದಿನಗಳಲ್ಲಿ ಸೀಟು ಹಂಚಿಕೆ ಕುರಿತು ನಿರ್ಧಾರ ಅಂತಿಮಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.


COMMERCIAL BREAK
SCROLL TO CONTINUE READING

ಪಕ್ಷದ ಹಿರಿಯ ಅಧಿಕಾರಿಗಳೊಂದಿಗೆ ಬಿಜೆಪಿಯೊಂದಿಗಿನ ಮೈತ್ರಿ ಮತ್ತು ಸ್ಥಾನಗಳ ಹಂಚಿಕೆ ಕುರಿತು ಚರ್ಚಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಲೋಕಸಭಾ ಚುನಾವಣೆಯ ಸಮಯದಲ್ಲಿ, ಅಮಿತ್ ಶಾ, ದೇವೇಂದ್ರ ಫಡ್ನವೀಸ್ ಮತ್ತು ನಾನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಯಾವ ಸ್ಥಾನಗಳನ್ನು ವಿಂಗಡಿಸಲಾಗುವುದು ಎಂಬ ಸೂತ್ರದ ಬಗ್ಗೆ ನಿರ್ಧರಿಸಿದ್ದೆವು. ಎರಡು ದಿನಗಳಲ್ಲಿ ಸೀಟು ಹಂಚಿಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.


ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಹೊಗೆಯಾಡುತ್ತಿದೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ರಾಜ್ಯದ 288 ಸ್ಥಾನಗಳಲ್ಲಿ ಬಿಜೆಪಿ ತನ್ನ ಮಿತ್ರ ಶಿವಸೇನೆಗೆ 126 ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ. ಆದರೆ ಶಿವಸೇನೆ 144 ಸ್ಥಾನಗಳಿಗೆ ಒತ್ತಾಯಿಸುತ್ತಿದೆ ಎಂದು ಹೇಳಲಾಗುತ್ತಿದೆ.


ಶಿವಸೇನೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮತ್ತು ಸ್ಥಾನ ಹಂಚಿಕೆ ಕುರಿತು ಚರ್ಚಿಸಲು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಪಕ್ಷದ ಪ್ರಧಾನ ಕಚೇರಿಯ ಸೇನಾ ಭವನದಲ್ಲಿ ಶುಕ್ರವಾರ ಸಭೆ ಕರೆದಿದ್ದರು. ಸಭೆಯಲ್ಲಿ ಏಕನಾಥ ಶಿಂಧೆ, ಸುಭಾಷ್ ದೇಸಾಯಿ, ನೀಲಂ ಗೋರ್, ದಾದಾ ಭೂಸ್, ರಾಮದಾಸ್ ಕದಮ್, ರವೀಂದ್ರ ವೈಕರ್, ದಿವಾಕರ್ ರಾವಟೆ, ಅನಿಲ್ ದೇಸಾಯಿ ಮತ್ತು ಗುಲಾಬ್ರಾವ್ ಪತಿ ಭಾಗವಹಿಸಿದ್ದರು. ಸಭೆಯ ನಂತರ, ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.