ಹೈದರಾಬಾದ್: "ನೀವು ಸಿಂಧೂರ, ಆಭರಣ ಧರಿಸುವುದಿಲ್ಲ ಯಾಕೆ? ನಿಮ್ಮ ಪತಿ ದಲಿತರು, ಅವರು ಸಂಪ್ರದಾಯ ಪಾಲಿಸಲ್ಲ ಎಂಬುದು ಸರಿ, ಆದರೆ ನೀವು ಬ್ರಾಹ್ಮಣರಾಗಿದ್ದುಕೊಂಡು ಸಂಪ್ರದಾಯ ಏಕೆ ಪಾಲಿಸುತ್ತಿಲ್ಲ? ನಿಮ್ಮ ಮಗಳೂ ಹೀಗೇ ಇರಬೇಕೇನು?" ಇವು ಪೊಲೀಸರು ಪ್ರೊಫೆಸರ್ ಒಬ್ಬರಿಗೆ ಕೇಳಿದ ಪ್ರಶ್ನೆಗಳು!!!


COMMERCIAL BREAK
SCROLL TO CONTINUE READING

ಹೈದರಾಬಾದ್ ನಗರದ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ಯೂನಿವರ್ಸಿಟಿಯ ಸಾಂಸ್ಕೃತಿಕ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಸತ್ಯನಾರಾಯಣ್ ಅವರ ನಿವಾಸವನ್ನು ಶೋಧಿಸುವ ಸಂದರ್ಭದಲ್ಲಿ ಅವರ ಪತ್ನಿ ಕೆ.ಪಾವನಾ ಅವರನ್ನು ಪೊಲೀಸರು ಈ ರೀತಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. 


ಬಂಧಿತ ಕವಿ ಮತ್ತು ಸಾಮಾಜಿಕ ಹೋರಾಟಗಾರ ವರವರರಾವ್ ಅವರ ಪುತ್ರಿ ಪಾವನಾ ಅವರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮೊದಲು ವರವರ ರಾವ್ ಅವರನ್ನು ಹುಡುಕಿಕೊಂಡು ಬಂದಿರುವುದಾಗಿ ಹೇಳಿದ್ದಾರೆ. ನಂತರ ಅವರ ಮನೆಯ ಕಪಾಟು, ಸೆಲ್ಫ್, ಪುಸ್ತಕಗಳನ್ನೆಲ್ಲಾ ಬಿಸಾಡಿ ಶೋಧ ಮಾಡಿದ್ದಾರೆ. ಅಲ್ಲದೆ, ವರವರರಾವ್ ಅವರನ್ನು ಮನೆಯಲ್ಲಿ ಬಚ್ಚಿಟ್ಟಿದ್ದೀರಾ ಎಂದು ಕೇಳಿದ್ದರು ಎಂದು ಪ್ರೊಫೆಸರ್ ಸತ್ಯನಾರಾಯಣ ಹೇಳಿದ್ದಾರೆ.


ಅಲ್ಲದೆ, "ನಿಮ್ಮ ಮನೆಯಲ್ಲಿ ಯಾಕೆ ಇಷ್ಟೊಂದು ಪುಸ್ತಕಗಳಿವೆ? ಅವನ್ನೆಲಾ ಯಾಕೆ ಓದುತ್ತೀರಿ? ಮಾವೋ, ಮಾರ್ಕ್ಸಿಸ್ಟ್ ಪುಸ್ತಕಗಳೇ ಏಕೆ ನಿಮ್ಮ ಮನೆಯಲ್ಲಿ ಹೆಚ್ಚಿವೆ? ಅಂಬೇಡ್ಕರ್ ಮತ್ತು ಫುಲೆ ಫೋಟೋಗಳೇಕಿವೆ? ಎಂದು ಕೇಳಿದ್ದಲ್ಲದೆ, ತಮ್ಮ ಕಂಪ್ಯೂಟರ್'ನಲ್ಲಿ ಸೇವ್ ಮಾಡಿದ್ದ 20 ವರ್ಷಗಳ ಸಾಹಿತ್ಯವನ್ನೂ ತೆಗೆದುಕೊಂಡು ಹೋಗಿದ್ದಾರೆ" ಎಂದು ಸತ್ಯನಾರಾಯಣ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ನಡೆದಿದೆ ಎನ್ನಲಾದ ಸಂಚಿನಲ್ಲಿ ಭಾಗಿಯಾದ ಆರೋಪದಡಿ ಮತ್ತು ಭೀಮಾ ಕೋರೆಗಾವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಪ್ರಮುಖ ಮಾವೋವಾದಿ ಚಿಂತಕ, ಕ್ರಾಂತಿಕವಿ ವರವರ ರಾವ್‌ ಅವರನ್ನು ಪುಣೆ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ್ದರು.