ಮಲ್ಲಿಕಾರ್ಜುನ ಖರ್ಗೆ ಸಾವು ಬಯಸಿದ ಬಿಜೆಪಿ ಶಾಸಕ; ಮೋದಿ ಕ್ಷಮೆಗೆ ಸುರ್ಜೇವಾಲ ಪಟ್ಟು
‘ರಾಜಸ್ಥಾನದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಮದನ್ ದಿಲಾವರ್ ಹೇಳಿಕೆ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ 80 ವರ್ಷವಾಗಿದ್ದು, ದೇವರು ಆತನನ್ನು ಯಾವಾಗಬೇಕಾದರೂ ಕರೆಸಿಕೊಳ್ಳಬಹುದು’ ಎಂದಿದ್ದಾರೆ. ಆ ಮೂಲಕ ದಲಿತ ಸಮುದಾಯದ ಶ್ರೇಷ್ಠ ನಾಯಕನ ವಿರುದ್ಧ ಬಿಜೆಪಿಯ ದ್ವೇಷ ಮನೋಭಾವ ಎದ್ದು ಕಾಣುತ್ತಿದೆ. ಬಿಜೆಪಿ ನಾಯಕರು ಖರ್ಗೆ ಅವರ ಸಾವು ಬಯಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗ್ರಹಿಸಿದ್ದಾರೆ.
ಬೆಂಗಳೂರು: ‘ರಾಜಸ್ಥಾನದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಮದನ್ ದಿಲಾವರ್ ಹೇಳಿಕೆ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ 80 ವರ್ಷವಾಗಿದ್ದು, ದೇವರು ಆತನನ್ನು ಯಾವಾಗಬೇಕಾದರೂ ಕರೆಸಿಕೊಳ್ಳಬಹುದು’ ಎಂದಿದ್ದಾರೆ. ಆ ಮೂಲಕ ದಲಿತ ಸಮುದಾಯದ ಶ್ರೇಷ್ಠ ನಾಯಕನ ವಿರುದ್ಧ ಬಿಜೆಪಿಯ ದ್ವೇಷ ಮನೋಭಾವ ಎದ್ದು ಕಾಣುತ್ತಿದೆ. ಬಿಜೆಪಿ ನಾಯಕರು ಖರ್ಗೆ ಅವರ ಸಾವು ಬಯಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್ ಗಳು ವಿಫಲವಾಗಿವೆ- ಮಲ್ಲಿಕಾರ್ಜುನ್ ಖರ್ಗೆ
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಳಿದ್ದಿಷ್ಟು,
‘ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಖರ್ಗೆ ಅವರು ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ರಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೂ ಏರಿದ್ದಾರೆ. ಅಂತಹವರ ವಿರುದ್ಧ ಇಂತಹ ಕೀಳು ಮಾತುಗಳು ಸಹಿಸಲು ಸಾಧ್ಯವಿಲ್ಲ. ರಾಜ್ಯದ ಜನರು ಪಕ್ಷಾತೀತವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಲ್ಲದ ಸರದಾರನೆಂದು ಕರೆಯುತ್ತಾರೆ. ಇಂತಹವರ ಸಾವನ್ನು ಬಿಜೆಪಿ ಬಯಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಖರ್ಗೆ ಅವರನ್ನು ದ್ವೇಷಿಸುವ ಕಾರಣಕ್ಕೆ ಬೊಮ್ಮಾಯಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡು 40ಕ್ಕಿಂತ ಕಡಿಮೆ ಸ್ಥಾನಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಜನ ನಿಮ್ಮನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ, ನಿರುದ್ಯೋಗಕ್ಕೆ ಉತ್ತರವಿಲ್ಲ ಎಂಬ ಕಾರಣಕ್ಕೆ ಖರ್ಗೆ ಅವರ ಸಾವು ಬಯಸುತ್ತೀರಾ? ಬಿಜೆಪಿ ಇಂತಹ ಕೀಳು ರಾಜಕೀಯಕ್ಕೆ ಇಳಿಯುತ್ತದೆಯೇ?
ಪ್ರಧಾನಮಂತ್ರಿಗಳೇ ನೀವು ಕರ್ನಾಟಕ ರಾಜ್ಯದಲ್ಲಿದ್ದು, ನಿಮ್ಮ ಶಾಸಕರು ಖರ್ಗೆ ಅವರ ಸಾವು ಬಯಸುತ್ತಿದ್ದು, ನೀವು ಮೌನವಾಗಿರುವುದೇಕೆ? ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ?
ಬಿಜೆಪಿ ಹಾಗೂ ಅದರ ನಾಯಕರು ಕಾಂಗ್ರೆಸ್ ನಾಯಕರನ್ನು ಅಪಮಾನಿಸುವ ಪ್ರವೃತ್ತಿ ಬೆಳೆಸಿಕೊಂಡಿರುವುದೇಕೆ? ಸೋನಿಯಾ ಗಾಂಧಿ ಅವರಿಂದ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ನಿರಂತರವಾಗಿ ಅಪಮಾನಿಸುತ್ತಿರುವುದೇಕೆ?
ಪ್ರಧಾನಮಂತ್ರಿಗಳೇ ನಿಮ್ಮ ನೆಚ್ಚಿನ ಸಚಿವ ಅಶ್ವತ್ಥ್ ನಾರಾಯಣ ಅವರು ಎರಡೂವರೆ ತಿಂಗಳ ಹಿಂದೆ ಮಂಡ್ಯದಲ್ಲಿ ಸಿದ್ದರಾಮಯ್ಯ ಅವರ ಹತ್ಯೆಗೆ ಕರೆ ನೀಡಿದ್ದರು. ಅವರ ವಿರುದ್ಧ ನೀವು ಯಾವುದಾದರೂ ಕ್ರಮ ಕೈಗೊಂಡಿರಾ? ನೀವು ಕನ್ನಡಿಗರ ಕ್ಷಮೆ ಕೋರಿದ್ದೀರಾ? ಆದರೆ ಇಂದು ದಲಿತ ಸಮುದಾಯದ ಶ್ರೇಷ್ಠ ನಾಯಕನ ಸಾವು ಬಯಸಿದ್ದೀರಿ.
ಇದನ್ನೂ ಓದಿ: ಕಾಂಗ್ರೆಸ್- ಜೆಡಿಎಸ್‌ದು ಶಾರ್ಟ್ ಕರ್ಟ್ ಸರ್ಕಾರ, ಇವುಗಳಿಂದ ಅಭಿವೃದ್ದಿ ಆಗಲ್ಲ..!
ನೀವು ಮಾತ್ರ ಎಲ್ಲಿ ಹೋದರೂ ಕಾಂಗ್ರೆಸ್ ಪಕ್ಷದವರು ನನ್ನನ್ನು 91 ಬಾರಿ ನಿಂದಿಸಿದ್ದಾರೆ ಎಂದು ಹೇಳುತ್ತಾ ಅಳುತ್ತೀರಿ? ಅದರ ಹೊರತಾಗಿ ನೀವು 40% ಸರ್ಕಾರದ ವಿರುದ್ಧ ಏನಾದರೂ ಕ್ರಮ ಕೈಗೊಳ್ಳುತ್ತೀರೋ? ಪ್ರಧಾನಮಂತ್ರಿಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು.
ಬಿಜೆಪಿಯು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ನಿರಂತರ ಆಂದೋಲನ ಹಮ್ಮಿಕೊಂಡಿದೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿ ಮೇಲೆ ದಾಳಿ ನಡೆಸುವ ಪ್ರಯತ್ನ ಮಾಡುತ್ತಿದ್ದು, ಕನ್ನಡ ಸಂಸ್ಥೆಗಳನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗೆ ನಾವು ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
ಮತ್ತೊಂದೆಡೆ ಬಿಜೆಪಿ 6.50 ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರಲು ಮುಂದಾಗಿದ್ದಾರೆ. ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಕನ್ನಡಿಗರ ಹೆಮ್ಮೆಯ ನಂದಿನಿಯನ್ನು ಗುಜರಾತಿನ ಅಮೂಲ್ ಜತೆ ವಿಲೀನ ಮಾಡಲು ಮುಂದಾಗುತ್ತದೆ. ಕೇಂದ್ರ ಸರ್ಕಾರ ಕನ್ನಡಿಗರ ವಿಜಯಾ ಬ್ಯಾಂಕ್ ಅನ್ನು ಗುಜರಾತಿನ ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನ ಮಾಡುತ್ತದೆ. ಮೋದಿ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವರು ಕನ್ನಡಿಗರು ತಮ್ಮ ಮಾತೃಭಾಷೆಯಲ್ಲಿ ಸಿಆರ್ ಪಿಎಫ್ ಪರೀಕ್ಷೆ ಬರೆಯುವುದನ್ನು ತಡೆಯುತ್ತಾರೆ. ಬಿಜೆಪಿ ಹಾಗೂ ಶಿವಸೇನಾ ಮಹರಾಷ್ಟ್ರ ಸರ್ಕಾರ ಕನ್ನಡದ 865 ಹಳ್ಳಿಗಳಲ್ಲಿ 54 ಕೋಟಿ ಖರ್ಚು ಮಾಡಿ ತನ್ನ ಯೋಜನೆ ಜಾರಿಗೆ ಮುಂದಾಗುತ್ತದೆ. ಆಮೂಲಕ ಗಡಿ ಉಲ್ಲಂಘನೆ ಮಾಡಲಿದೆ. ಆಮೂಲಕ ರಾಜ್ಯವನ್ನು ಒಡೆಯುವ ಷಡ್ಯಂತ್ರ ಮಾಡಿದೆ. ಇನ್ನು ಗೋವಾ ಮಹಾದಾಯಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯದ ಹಕ್ಕನ್ನು ವಿರೋಧಿಸುತ್ತದೆ. ಮೋದಿ ಸರ್ಕಾರ 8 ಸಾವಿರ ಕೋಟಿ ಜಿಎಸ್ ಟಿ ಬಾಕಿಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಿಲ್ಲ. ಈ ಮಧ್ಯೆ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಯಾವುದೇ ನಾಯಕತ್ವವಿಲ್ಲ ಎಂದು ರಾಜ್ಯವನ್ನು ಮೋದಿ ಅವರ ಕೈಗೆ ನೀಡುವಂತೆ ಕೇಳುತ್ತಾನೆ. ಇದಕ್ಕೆಲ್ಲ ಮೇ 10ರಂದು ರಾಜ್ಯದ ಜನ ತಕ್ಕ ಉತ್ತರ ನೀಡಲಿದ್ದಾರೆ. ಇದು ಇತಿಹಾಸಕ್ಕೆ ಸೇರಲಿದೆ.
ಮೊದಲು ಬಿಜೆಪಿ ಸಚಿವರು ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರ ಹತ್ಯೆಗೆ ಕರೆ ನೀಡುತ್ತಾರೆ. ಮತ್ತೊಂದೆಡೆಗೆ ಬಿಜೆಪಿ ರಾಜಸ್ಥಾನದ ಶಾಸಕ ದಲಿತ ನಾಯಕನ ಸಾವು ಬಯಸುತ್ತಾರೆ. ಇದಕ್ಕೆ ಜನ ಕ್ಷಮೆ ನೀಡುವುದಿಲ್ಲ. ಈ ವಿಚಾರವಾಗಿ ಮೋದಿ ಅವರು ಕ್ಷಮೆಯಾಚಿಸಬೇಕು. ಇದರ ಜತೆಗೆ ಬಿಜೆಪಿಯ 40% ಕಮಿಷನ್ ಸರ್ಕಾರದ ಲೂಟಿ ಬಗ್ಗೆ ಉತ್ತರ ನೀಡಬೇಕು.’
ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ನಾವು ಈಗಾಗಲೇ ಅನೇಕ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇನ್ನು ನಾವು ರಾಜ್ಯದ ಜನರ ಮುಂದೆ ಹೋಗಿ ಈ ಬಗ್ಗೆ ಜನರೇ ತೀರ್ಮಾನ ಮಾಡಲು ಬಿಡುತ್ತೇವೆ’ ಎಂದು ತಿಳಿಸಿದರು.
ಬಜರಂಗದಳದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ ಹಾಗೂ ಅದರ ನಾಯಕರಿಗೆ ಹನುಮಾನ್ ಚಾಲೀಸ ಓದಲು ಬರುವುದಿಲ್ಲ. ಅವರಿಗೆ 40% ಕಮಿಷನ್ ತೆಗೆದುಕೊಳ್ಳುವುದಷ್ಟೇ ಗೊತ್ತು. ಮೋದಿ ಅವರಿಗೆ ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ. ಮೋದಿ ಅವರೇ ನಾನು ಮಹಾರಾಷ್ಟ್ರದ ಕಪಿಸ್ಥಳದಿಂದ ಬಂದಿದ್ದೇನೆ. ಬಜರಂಗದಳವನ್ನು ಹನುಮಂತನಿಗೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅಪಮಾನ. ಹನುಮಂತ ಕರ್ತವ್ಯನಿಷ್ಠೆ, ಸೇವೆಯ ಪ್ರತೀಕವಾಗಿದ್ದಾರೆ. ಹನುಮಂತ ತ್ಯಾಗದ ಪ್ರತೀಕ. ಹನುಮಂತ ಬೇರೆಯವರ ಕಷ್ಟಗಳನ್ನು ತನ್ನದೆಂದು ಭಾವಿಸುತ್ತಾರೆ. ಇಂತಹ ಹನುಮಂತನನ್ನು ಹಿಂಸಾಚಾರ ಮಾಡುವವರ ಜತೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡುವ ಅಗೌರವ. ಇದರಿಂದ ಲಕ್ಷಾಂತರ ಹನುಮ ಭಕ್ತರಿಗೆ ನೋವಾಗಿದೆ. ಹೀಗಾಗಿ ಅವರು ಕ್ಷಮೆ ಕೇಳಬೇಕು. ಬಿಜೆಪಿಯ ಹಾಲಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಪುರಾತನ ಹನುಮ ದೇವಾಲಯಗಳನ್ನು ಕೆಡವಿದೆ. ನಂಜನಗೂಡಿನಲ್ಲಿ 3 ಸಾವಿರ ಹಳೆಯ ಹನುಮಂತನ ದೇವಾಲಯ ಕೆಡವಿದವರು ಯಾರು? ಇದನ್ನು ಕೆಡವಿದವರು ಬಿಜೆಪಿ ಸರ್ಕಾರ. ಇದರ ವಿರುದ್ಧ ವಿಹೆಚ್ ಪಿ, ಬಜರಂಗದಳ ಯಾಕೆ ವಿರೋಧಿಸಲಿಲ್ಲ? ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು 150 ವರ್ಷಗಳ ಹಳೆಯ ಹನುಮಂತನ ದೇವಾಲಯವನ್ನು ಜ.27, 2020ರಂದು ಕೆಡವಿದ್ದರು. ಇದರ ವಿರುದ್ಧ ವಿಹೆಚ್ ಪಿ ಹಾಗೂ ಬಜರಂಗದಳದವರು ಹೋರಾಟ ಮಾಡಿದ್ದರೆ? ಶಿವಮೊಗ್ಗ ನಗರದಲ್ಲಿ ಫೆ.17, 2021ರಂದು ಹಳೆಯ ದೇವಾಲಯ ಕೆಡವಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತೇ? ಆಗ ಹನುಮಾನ್ ಚಾಲೀಸ ಪಠಿಸಲಾಗಿತ್ತೇ? ಇಲ್ಲ. ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಫೆ.28, 2022ರಂದು ಬಿಜೆಪಿ ಹನುಮ ದೇವಾಲಯ ಕೆಡವಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆದಿತ್ತೇ? ಇಲ್ಲ. 1500 ದೇವಾಲಯಗಳನ್ನು ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕೆಡವಿದೆ. ಇದರ ಬಗ್ಗೆ ಮೋದಿ ಅವರು ಮಾತನಾಡಿದ್ದಾರಾ? ಇದಕ್ಕೆ ನೀವು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೀರಾ? ಈಗ ಚುನಾವಣೆ ಬಂದಿದೆ ಎಂಬ ವಿಚಾರವಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ಹಿಂದೂ, ನಾನು ಹನುಮಭಕ್ತ. ನನ್ನ ಕ್ಷೇತ್ರದಲ್ಲಿ ಹನುಮ ದೇವಾಲಯ ಕಟ್ಟಿದ್ದೇನೆ. ಆದರೂ ನನಗೆ ಸಂವಿಧಾನವೇ ದೇವರು. ಈ ಸಂವಿಧಾನ ನಮ್ಮ ಧಾರ್ಮಿಕ ಹಕ್ಕನ್ನು ರಕ್ಷಿಸುತ್ತದೆ. ನಾವು ಸಮಾಜದಲ್ಲಿ ಯಾರು ಕಾಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದೇವೆ’ ಎಂದು ಉತ್ತರಿಸಿದರು.
ಲೋಕಸಭಾ ಸದ್ಯ ತೇಜಸ್ವಿ ಸೂರ್ಯ ಅವರು ಪಿಎಫ್ಐ ಜತೆಗೆ ಬಜರಂಗದಳ ಹೋಲಿಕೆ ಮಾಡುವುದು ಸರಿಯಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ತೇಜಸ್ವಿ ಸೂರ್ಯ ಅವರು ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆಯಲಿ, ನಂತರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೇನೆ.’ ಎಂದು ತಿಳಿಸಿದರು.
ಬಜರಂಗದಳದವರು ನಿಜವಾದ ಹನುಮಭಕ್ತರಲ್ಲ ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ, ‘ನೀವು ಕೂಡ ಹನುಮಂತನ ನಿಜವಾದ ಭಕ್ತ ಎಂದು ನಾನು ನಂಬಿದ್ದೇನೆ. ಆದರೆ ರಾಮನಾಗಲಿ, ಹನುಮಂತನಾಗಲಿ, ವಿಷ್ಣುವಾಗಲಿ, ಕಾಳಿಯಾಗಲಿ, ಶಿವ ಪಾರ್ವತಿಯಾಗಲಿ ಅಥವಾ ಭಾರತದಲ್ಲಿ ಪೂಜಿಸುವ 36 ಕೋಟಿ ದೇವತೆಗಳಲ್ಲಿ ಯಾವುದೇ ದೇವತೆ ಹೆಸರಲ್ಲಿ ಹಿಂಸಾಚಾರ ನಡೆಸುವಂತಿಲ್ಲ. ನನ್ನ ಹಿಂದೂ ಧರ್ಮ ಪ್ರಾಮಾಣಿಕತೆ ಕಲಿಸಿದೆ. ಹಿಂದೂ ಧರ್ಮದಲ್ಲಿ ವಸುದೈವ ಕುಟುಂಬಕಂ ಎಂಬ ಅಂಶ ನಮಗೆ ಇಡೀ ವಿಶ್ವ ನಮ್ಮ ಕುಟುಂಬ ಎಂಬ ಸಂದೇಶ ಕಲಿಸಿದೆ. ಅದರ್ಥ, ಹಿಂದೂಗಳು ಎಂದರೆ ಎಲ್ಲರನ್ನು ಒಳಗೊಳ್ಳುವುದು, ತ್ಯಾಗ, ಗೌರವ, ಸಾಮರಸ್ಯ ಆದರೆ ಕೆಲವರು ತಮ್ಮ ಸ್ವಾರ್ಥಕ್ಕೆ ನನ್ನ ಧರ್ಮದ ವಾಖ್ಯಾನವನ್ನು ತಿರುಚುತ್ತಿದ್ದಾರೆ. ನಾನು ಮಹಾಭಾರತದ ಭೂಮಿಯಿಂದ ಬಂದಿದ್ದು, ನೀವು ಭಗವದ್ಗೀತೆ ಓದಿದ್ದೀರಾ? ಮೋದಿ ಅವರು ಒಂದು ಬಾರಿಯಾದರೂ ಭಗವದ್ಗೀತೆ ಓದಿದ್ದರೆ ಉತ್ತಮವಾಗಿರುತ್ತಿತ್ತು. ಅವರಿಗೆ ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯವಿದೆ ಎಂದು ತಿಳಿದಿದೆಯೋ ಇಲ್ಲವೋ. ಗೊತ್ತಿದ್ದರೆ ಈ ಭಾಷೆ ಬಳಸುತ್ತಿರಲಿಲ್ಲ. ನಮ್ಮನ್ನು ಪ್ರಶ್ನಿಸುತ್ತಿರುವವರು ಎಂದಾದರೂ ಹನುಮಾನ ಚಾಲೀಸ ಓದಿದ್ದಾರಾ? ನಾನು ಬೇಕಾದರೆ ನಾಲ್ಕು ಸಾಲು ಹೇಳುತ್ತೇನೆ. ಮಹಾವೀರ ವಿಕ್ರಮ ಭಜರಂಗಿ, ಕುಮತಿ ನಿವಾಸ ಸುಮತಿ ಕೇ ಸಂಗಿ. ಅಂದರೆ ಬಜರಂಗ ಬಲಿಯ ಸ್ಮರಣೆಯನ್ನು ಸದ್ಬುದ್ಧಿ ಹಾಗೂ ಉತ್ತಮ ನಡವಳಿಕೆ ಇರುವವರು ಮಾತ್ರ ಮಾಡಬೇಕು. ಯಾರ ಬುದ್ಧಿ ಭ್ರಷ್ಟವಾಗಿರುತ್ತದೆಯೋ ಅವರಿಗೆ ಹನುಮಂತನ ಆಶೀರ್ವಾದ ಸಿಗುವುದಿಲ್ಲ’ ಎಂದು ತಿಳಿಸಿದರು.
ನಿಮ್ಮ ಪ್ರಣಾಳಿಕೆ ಅತ್ಯುತ್ತಮವಾಗಿದ್ದರೆ ಕೋಮು ಅಂಶಗಳನ್ನು ಸೇರಿಸಿದ್ದು ಯಾಕೆ ಎಂಬ ಪ್ರಶ್ನೆಗೆ, ‘ಇದು ಕೋಮು ವಿಚಾರವಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಸಂವಿಧಾನ ಉಲ್ಲಂಘನೆ ಮಾಡುವವರು ಹಾಗೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ದಲಿತ ಯುವಕ ದಿನೇಶ್ ಎಂಬಾತನನ್ನು ಬಜರಂಗದಳದ ಪದಾಧಿಕಾರಿಗಳು ಹಾಡಹಗಲಲ್ಲಿ ಹತ್ಯೆ ಮಾಡಿದರೆ ಅದು ಕಾನೂನು ಉಲ್ಲಂಘನೆ ಆಗುವುದಿಲ್ಲವೇ? ದಲಿತ ಸಂಘರ್ಷ ಸಮಿತಿ ಈ ವಿಚಾರವಾಗಿ ಮುಖ್ಯಮಂತ್ರಿ ಭೇಟಿಗೆ ಮುಂದಾದಾಗ ಮುಖ್ಯಮಂತ್ರಿಗಳು ಅವರನ್ನು ಭೇಟಿ ಸಹ ಮಾಡಲಿಲ್ಲ. ಯಾರೇ ದ್ವೇಷ ಶತೃತ್ವ ಪಸರಿಸಿದರೂ ನಾವು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.