ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಆಗಿದ್ದೇ ಆಗಿದ್ದು, ಬಂಡಾಯದ ಬಾವುಟಗಳು ಹಾರಾಡುತ್ತಿವೆ. ಅಷ್ಟೇ ಅಲ್ಲ ಒಂದೊಂದೇ ‘ಕಮಲ’ದ ದಳಗಳು ‘ಕೈ’ ಸೇರುತ್ತಿವೆ. ಇಷ್ಟೆಲ್ಲ ಬಂಡಾಯ ಎದ್ದಿದ್ದರೂ, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವವರಿಗೆ ಬ್ರೇಕ್ ಹಾಕುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ಹೈಕಮಾಂಡ್ ಅಕ್ಷರಶಃ ವಿಫಲವಾಗಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ.


COMMERCIAL BREAK
SCROLL TO CONTINUE READING

ಹೌದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾದರು. ಅಷ್ಟೇ ಅಲ್ಲ ಜಗದೀಶ ಶೆಟ್ಟರ್ ‘ಕೈ’ ಮನೆ ಸೇರಿದರು. ಇತ್ತ ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ತವನಪ್ಪ ಅಷ್ಟಗಿ ಕೂಡ ಬಂಡಾಯದ ಬಾವುಟ ಹಾರಿಸಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆಪ್ತರಾಗಿದ್ದ ತವನಪ್ಪ ಅವರ ಮನವೊಲಿಸುವಲ್ಲಿ ಯಾರೂ ಯಶಸ್ವಿ ಆಗಲೇ ಇಲ್ಲ.


ಇದನ್ನೂ ಓದಿ: ಆರ್‌ಎಸ್‌ಎಸ್ ‘ವಿಘ್ನಸಂತೋಷಿ’ಗಳು ಲಿಂಗಾಯತ ನಾಯಕರನ್ನು ಮುಗಿಸುವ ಸಂಚು ರೂಪಿಸಿವೆ..!


ವಿನಯ್ ಕುಲಕರ್ಣಿ ಅವರನ್ನು ಕಳೆದ ಬಾರಿ ಸೋಲಿಸಲು ಸಾಕಷ್ಟು ಶ್ರಮವಹಿಸಿದ್ದ ತವನಪ್ಪ ಅಷ್ಟಗಿ ಈ ಬಾರಿ ಬಿಜೆಪಿಗೆ ಮಗ್ಗಲ ಮುಳ್ಳಾಗುತ್ತಾರೆ ಎಂಬ ಮಾತುಗಳೂ ದಟ್ಟವಾಗಿ ಕೇಳಿ ಬರುತ್ತಿವೆ. ಈ ಬಾರಿ ತಮ್ಮ ಬೆಂಬಲ ವಿನಯ್ ಕುಲಕರ್ಣಿ ಅವರಿಗೆ ಎಂದು ತವನಪ್ಪ ಸ್ಪಷ್ಟವಾಗಿ ಹೇಳಿರುವುದರಿಂದ ಇದೀಗ ಬಿಜೆಪಿಯಲ್ಲಿ ಆತಂಕ ಶುರುವಾಗಿದೆ.


ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆಪ್ತರಲ್ಲೊಬ್ಬರಾದ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಕೂಡ ಆಗಿರುವ ಈರೇಶ ಅಂಚಟಗೇರಿ ಅವರಿಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದೇ ಇದ್ದಿದ್ದರಿಂದ ಅವರು ಕೂಡ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಳೆದ ಬಾರಿ ಅಮೃತ ದೇಸಾಯಿ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದ ಅಂಚಟಗೇರಿ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ನಿಭಾಯಿಸದೇ ತಟಸ್ಥವಾಗಿ ಉಳಿದಿದ್ದಾರೆ. ಇದನ್ನೆಲ್ಲ ನೋಡಿದರೆ ಜೋಶಿ ಅವರು ತಮ್ಮ ಆಪ್ತರನ್ನೇ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ.


ಇದನ್ನೂ ಓದಿ: ಹಗರಣ ಇಲ್ಲದೆ ಶಿಕ್ಷಕರ ನೇಮಕ; ಸಿಎಂ ಬಸವರಾಜ ಬೊಮ್ಮಾಯಿ


ಒಟ್ಟಾರೆ ಧಾರವಾಡ ಜಿಲ್ಲೆಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರೇ ‘ಕಮಲ’ ಬಿಟ್ಟು ‘ಕೈ’ ಹಿಡಿಯುತ್ತಿರುವುದು ಬಿಜೆಪಿಗೆ ಆತಂಕಕಾರಿ ವಿಷಯವಾದರೂ ಬಿಜೆಪಿ ಹೈಕಮಾಂಡ್ ಹಾಗೂ ಜೋಶಿ ಅವರು ಇದರತ್ತ ಮನಸ್ಪೂರ್ವಕವಾಗಿ ಗಮನಹರಿಸದೇ ಇರುವುದು ಕಟ್ಟಾ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.