ಬೆಂಗಳೂರು : ಲಿಂಗಾಯತರ ಕುರಿತು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಇದೀಗ ಪತ್ರಿಕಾ ಹೇಳಿಕೆಯ ಮೂಲಕ ಕಮಲಪಾಳಯದ ವಿರುದ್ಧ ಗುಡುಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿರುವ ಲಿಂಗಾಯತ ಸಮುದಾಯದ ನಾಯಕರನ್ನು ನೋಡಿದಾಗ ʼಹಾವಿನ ಹೆಡೆಯ ಮೇಲಿನ ಕಪ್ಪೆ ಹಾರುವ ನೊಣಕ್ಕೆ ಆಶಿಸಿದಂತೆ… ಎಂಬ ಬಸವಣ್ಣನವರ ವಚನ ನೆನಪಾಗುತ್ತಿದೆ. ರಾಜಕೀಯವಾಗಿ ತಮ್ಮನ್ನು ಮುಗಿಸಲು ಆರ್ಎಸ್ಎಸ್ ‘ವಿಘ್ನಸಂತೋಷಿ’ಗಳು ಮಾಡುತ್ತಿರುವ ಸಂಚನ್ನು ಅರಿಯದ ಬಿಜೆಪಿಯ ಲಿಂಗಾಯತ ನಾಯಕರು, ಕಾಂಗ್ರೆಸ್ ಪಕ್ಷ ಲಿಂಗಾಯತ ವಿರೋಧಿ ಎಂಬ ಸುಳ್ಳು ಆರೋಪ ಮಾಡುತ್ತಾ ಕಾಲ ಕಳೆಯುತ್ತಿರುವುದು ವಿಷಾದನೀಯ ಎಂದು ಹೇಳಿದಾರೆ.
ಅಲ್ಲದೆ, ರಾಜ್ಯದಲ್ಲಿ ನೆಲೆಯೇ ಇಲ್ಲದಿದ್ದ ಬಿಜೆಪಿಯನ್ನು ಅಧಿಕಾರದ ಪೀಠದಲ್ಲಿ ತಂದು ಕುಳ್ಳಿರಿಸಿದ ಲಿಂಗಾಯತ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದು ಆರ್ ಎಸ್ ಎಸ್ ನ ‘ವಿಘ್ನ ಸಂತೋಷಿ’ಗಳೇ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ. ಜಗದೀಶ್ ಶೆಟ್ಟರ ರಾಜಕೀಯ ಜೀವನವನ್ನು ಮುಗಿಸುವ ಹುನ್ನಾರದ ರೂವಾರಿಗಳು ಕೂಡಾ ಇದೇ ‘ವಿಘ್ನ ಸಂತೋಷಿ’ ಗಳು. ಕಾಂಗ್ರೆಸ್ ಅಲ್ಲ.
ಇದನ್ನೂ ಓದಿ: Karnataka election 2023: ಬಿಜೆಪಿಗೆ ಮತ ಹಾಕಿದರೆ ಜನರಿಗೆ ಸಾವೇ ಗತಿ!- ಕಾಂಗ್ರೆಸ್
ಗೆಲ್ಲುವ ಅವಕಾಶವೇ ಇಲ್ಲದ ವರುಣಾ ಕ್ಷೇತ್ರದಲ್ಲಿ ಒಲ್ಲೆನೆಂದರೂ ಬಲಾತ್ಕಾರವಾಗಿ ವಿ.ಸೋಮಣ್ಣ ಎಂಬ ಲಿಂಗಾಯತ ನಾಯಕನನ್ನು ಅಭ್ಯರ್ಥಿ ಮಾಡಿದ್ದು ಕೂಡಾ ಇದೇ ಆರ್ ಎಸ್ ಎಸ್ ‘ವಿಘ್ನ ಸಂತೋಷಿ’ಗಳು. ಲಕ್ಷ್ಮಣ ಸವದಿ, ಸೊಗಡು ಶಿವಣ್ಣ, ಸಂಜಯ್ ಪಾಟೀಲ್ ಮೊದಲಾದ ಲಿಂಗಾಯತ ನಾಯಕರಿಗೆ ಟಿಕೆಟ್ ನಿರಾಕರಿಸಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದು ಕೂಡಾ ಇದೇ ಆರ್ ಎಸ್.ಎಸ್ ‘ವಿಘ್ನ ಸಂತೋಷಿ’ಗಳು.
ಈಗ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಹೊಣೆಯನ್ನು ಕೂಡಾ ಬಿ.ಎಸ್.ಯಡಿಯೂರಪ್ಪನವರ ಮೇಲೆ ಹೊರಿಸಲಾಗಿದೆ. ಇವರಲ್ಲಿ ಯಾರೂ ಸೋತರೂ ಒಬ್ಬ ಲಿಂಗಾಯತ ನಾಯಕರು ಸೋತ ಹಾಗೆ ಅಲ್ಲವೇ? ಆದರೆ ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ತಮ್ಮ ನಿಜವಾದ ಶತ್ರುಗಳು ಯಾರೆಂದು ಅರ್ಥಮಾಡಿಕೊಳ್ಳದೆ, ವೃಥಾ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಇದು ಕೂಡಾ ಆರ್ ಎಸ್ ಎಸ್ ನ ‘ವಿಘ್ನ ಸಂತೋಷಿ’ಗಳ ಹುನ್ನಾರವೇ ಆಗಿದೆ.
ಬದಲಾವಣೆಯ ಹೆಸರಲ್ಲಿ ಬಿಜೆಪಿಯೊಳಗಿನ ಆರ್ ಎಸ್ ಎಸ್ ‘ವಿಘ್ನ ಸಂತೋಷಿ’ಗಳು ಮಾಡುತ್ತಿರುವ ಈ ಎಲ್ಲ ಪ್ರಯೋಗಗಳು ಅಂತಿಮವಾಗಿ ಪಕ್ಷದೊಳಗಿನ ಹಿರಿಯ ಮತ್ತು ಪ್ರಭಾವಿ ಲಿಂಗಾಯತ ನಾಯಕರ ತಲೆದಂಡ ತೆಗೆದುಕೊಳ್ಳುವ ರಾಜಕೀಯ ಕುತಂತ್ರವೇ ಆಗಿದೆ ಎನ್ನುವುದನ್ನು ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಮತ್ತು ಒಟ್ಟು ಲಿಂಗಾಯತ ಸಮುದಾಯ ಅರಿತುಕೊಳ್ಳಬೇಕಾಗಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಕಲ್ಪಿತ ಶತ್ರುವಿನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ ತಮ್ಮ ನಿಜವಾದ ಶತ್ರುಗಳನ್ನು ಗುರುತಿಸಿ ಹೋರಾಟ ನಡೆಸಬೇಕೆಂದು ಮನವಿ ಮಾಡುತ್ತೇನೆ.. ಎಂದು ಹೇಳಿಕೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ