Karnataka Assembly Elections: ಮುಂಬರುವ ವಿಧಾನಸಭಾ ಚುನಾವಣೆಗಳನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಒಳ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿದ್ದು, ಅದೇ ಮೀಸಲಾತಿ ಅಸ್ತ್ರ ಈಗ ಬಿಜೆಪಿಗೆ ತಿರುಗುಬಾಣವಾಗಿದೆ. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಬಂಜಾರ ಸಮುದಾಯ ನೇರವಾಗಿ ತೊಡೆತಟ್ಟೆ ನಿಂತಿದ್ದು, ಮೀಸಲಾತಿ ಅಸ್ತ್ರ ಬಿಜೆಪಿ ಪಾಲಿಗೆ ಈಗ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯದಲ್ಲೆಡೆ ಬಿಜೆಪಿ ಸರ್ಕಾರದ ವಿರುದ್ಧ ಬಂಜಾರ ಸಮುದಾಯದ ಬಾಂಧವರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಬಾಗಲಕೋಟೆಯಲ್ಲಿಯೂ ಕೂಡ  ಬಂಜಾರ ಸಮಾಜದ ಬಾಂಧವರ ಆಕ್ರೋಶ ಮುಗಿಲುಮಟ್ಟಿದೆ.


COMMERCIAL BREAK
SCROLL TO CONTINUE READING

ಒಂದೆಡೆ ಬಿಜೆಪಿಯ ಧ್ವಜಗಳನ್ನ ತೆರವುಗೊಳಿಸುತ್ತಿರುವ ಯುವಕರು, ಇನ್ನೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವ ಜನರು. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾ. ಹೌದು, ಬಿಜೆಪಿ ಸರ್ಕಾರದ ಒಳ ಮೀಸಲಾತಿಯ ವಿರುದ್ಧ ಈಗ ಬಂಜಾರ ಸಮುದಾಯದ ಬಾಂಧವರು ಸಿಡಿದೆದ್ದಿದ್ದು, ಮುಚಖಂಡಿ ತಾಂಡಾದಲ್ಲಿ ಬಿಜೆಪಿ ಧ್ವಜಗಳನ್ನ ತೆರವುಗೊಳಿಸುವುದರ ಮೂಲಕ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಇನ್ನು ಮುಂದೆ ಬಿಜೆಪಿಯ ನಾಯಕರಿಗೆ ಮುಚಖಂಡಿ ತಾಂಡಾಗಳಲ್ಲಿ ಪ್ರವೇಶವಿಲ್ಲವೆಂದು ಬ್ಯಾನರ್ ಹಾಕುವುದರ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ.


ಇದನ್ನೂ ಓದಿ- ಸಿಎಂ ಬಲಗೈ ಭಂಟ ಕಾಂಗ್ರೆಸ್ ಸೇರ್ಪಡೆ, ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ: ಡಿ.ಕೆ.ಶಿವಕುಮಾರ್


ಜಿಲ್ಲೆಯ ವಿವಿಧ 48 ತಾಂಡಾಗಳಲ್ಲಿ  ಸಭೆಗಳನ್ನು ನಡೆಸುವುದರ ಮೂಲಕ ಬಿಜೆಪಿಯ ವಿರುದ್ಧ ಹರಿಹಾಯ್ದಿದ್ದಾರೆ. ಜಿಲ್ಲೆಯ ನಾಯನೇಗಿಲು, ಸೀತಿಮನಿ, ಲವಳೇಶ್ವರ, ನೀಲಾನಗರ, ಗುಳಬಾಳ, ಶಿರಗುಂಪಿ, ಜಲಗೇರಿ ತಾಂಡಾಗಳಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬಂಜಾರಾ ಸಮಾಜದ ಪ್ರಮುಖ ನಾಯಕರುಗಳ ಭಾವಚಿತ್ರಕ್ಕೆ ಮಾಲೆ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ, ಬಂಜಾರಾ ಸಮಾಜದಲ್ಲಿ ಮತ್ತೊಮ್ಮೆ ಹುಟ್ಟಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.  


ಬಿಜೆಪಿ ಸರ್ಕಾರದಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದ್ದು, ಬಿಜೆಪಿ ಪಕ್ಷದಲ್ಲಿ ಇರುವ ಬಂಜಾರ ಸಮುದಾಯದ  ಶಾಸಕರು ರಾಜೀನಾಮೆ ಕೊಡುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರ ಈಗಾಗಲೇ ಮಾಡಿರುವ ಒಳ ಮೀಸಲಾತಿಯನ್ನು ರದ್ದುಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಮನೆಗಳ ಮುಂದೆ ಮತ್ತು ತಾಂಡಾಗಳಲ್ಲಿ ಕಂಬಗಳ ಮೇಲೆ ಕಟ್ಟಿದ್ದ ಬಿಜೆಪಿ ಧ್ವಜಗಳನ್ನ ತೆರವುಗೊಳಿಸಿ  ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ.


ಇದನ್ನೂ ಓದಿ- "ಸಿಟಿ" ರವಿಗೂ "ಓಟಿ" ಮದ್ಯಕ್ಕೂ ಯಾವ ಜನ್ಮದ ಮೈತ್ರಿ!?: ಕಾಂಗ್ರೆಸ್ ವ್ಯಂಗ್ಯ


ಒಟ್ಟಾರೆ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಒಳ ಮೀಸಲಾತಿ ಅಸ್ತ್ರವನ್ನ ಪ್ರಯೋಗಿಸಿದ್ದ ಬಿಜೆಪಿ ಸರ್ಕಾರಕ್ಕೆ ಈಗ  ಅದೇ ಮೀಸಲಾತಿ ಅಸ್ತ್ರ ತಿರುಗುಬಾಣವಾಗಿ ಪರಿಣಮಿಸಿದೆ. ಮುಂದೆ ಈ ಹೋರಾಟ  ಚುನಾವಣೆಯ ಮೇಲೆ ಅದ್ಯಾವ ರೀತಿ ಪರಿಣಾಮವನ್ನು ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.