`ಈ ಸರ್ಕಾರದ್ದು ಕೇವಲ ಭಾಷಣಕ್ಕೆ ಸೀಮಿತವಾಗಿರುವ ಬಜೆಟ್`
ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆ, ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುವುದಾಗಿ ರಾಹುಲ್ ಗಾಂಧಿ ಅವರು ಹೇಳಿದ್ದು, ನಾನು ಅದಕ್ಕೆ ಬದ್ಧವಾಗಿದ್ದೇನೆ. ನಿಮ್ಮ ಬದುಕು ಹಸನಾಗಬೇಕು, ಎಲ್ಲ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು.
ಸಾಲಿಗ್ರಾಮ: ನಾಳೆ ಬೊಮ್ಮಾಯಿ ಅವರು ಬಜೆಟ್ ಮಂಡಿಸುತ್ತಿದ್ದು, ಈ ಸರ್ಕಾರದ ಕೊನೆ ಬಜೆಟ್ ಆಗಿದೆ. ಇದು ಕೇವಲ ಭಾಷಣಕ್ಕೆ ಸೀಮಿತವಾಗಿರುವ ಬಜೆಟ್. ಕಳೆದ ವರ್ಷ ಮಂಡಿಸಿದ ಬಜೆಟ್ ಅರ್ಧದಷ್ಟು ಕಾರ್ಯರೂಪಕ್ಕೆ ತಂದಿಲ್ಲ. ಇನ್ನು ಮತ್ತೆ ಬಜೆಟ್ ಹೇಗೆ ಮಂಡಿಸುತ್ತೀರಿ ಎಂದು ಕೇಳಬಯಸುತ್ತೇನೆ. ಬಿಜೆಪಿ 2018 ರ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದು 550 ಅನ್ನು ಈಡೇರಿಸಿಲ್ಲ. ಈ ಬಗ್ಗೆ ಉತ್ತರ ನೀಡಬೇಕು ಎಂದು ಕೇಳಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಅವರು ಕೆ.ಆರ್ ನಗರದಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಲ್ಲಿಗೆ ಬಂದಾಗ ನನಗೆ ಭತ್ತದ ಹಾರ ಹಾಕಿ ಸ್ವಾಗತಿಸಿದ್ದೀರಿ. ನೀವು ತೋರಿದ ಪ್ರೀತಿ, ವಿಶ್ವಾಸ ಬದಲಾವಣೆ ತರಲು ಸ್ಫೂರ್ತಿಯಾಗಿದೆ.
ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವುದೇ ನಿಮ್ಮ ನೋವು, ಸಂಕಷ್ಟಕ್ಕೆ ಪರಿಹಾರ ನೀಡಲು. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು. ಇಲ್ಲಿನ ಬಹುತೇಕರು ರೈತರು. ರೈತನಿಗೆ ಲಂಚ, ಪಿಂಚಣಿ, ನಿವೃತ್ತಿ ಯಾವುದೂ ಇಲ್ಲ. ಮಳೆ, ಭೂಮಿ ಬೆಳೆ ಮೇಲೆ ಅವಲಂಬಿತವಾಗಿರುವ ಈ ರೈತರ ರಕ್ಷಣೆ ಮಾಡಬೇಕಿದೆ.
ಯಡಿಯೂರಪ್ಪ ಹಾಗೂ ಮೋದಿ ಅವರು ನಮಗೆ ಡಬಲ್ ಇಂಜಿನ್ ಸರ್ಕಾರ ಕೊಡಿ, ಅಚ್ಛೇದಿನ ನೀಡುತ್ತೇವೆ ಎಂದರು. ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದರು. ಕೊಬ್ಬರಿ ಬೆಲೆ 20 ಸಾವಿರ ಇತ್ತು. ಇಂದು 10 ಸಾವಿರ ಆಗಿದೆ. ಆದರೆ ರಸಗೊಬ್ಬರ ಬೆಲೆ ದುಪ್ಪಟ್ಟಾಗಿದೆ. ರೈತರ ಆದಾಯ ಕುಸಿದಿದ್ದು, ವೆಚ್ಚ ಮಾತ್ರ ಡಬಲ್ ಆಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅಡುಗೆ ಅನಿಲ 400 ರೂ. ಇತ್ತು. ಈಗ 1100 ಆಗಿದೆ. ಅಡುಗೆ ಎಣ್ಣೆ 90 ರಿಂದ 230 ಆಗಿದೆ. ಈ ಬೆಲೆ ಏರಿಕೆ ಮಧ್ಯೆ ಆದಾಯ ಡಬಲ್ ಆಗುವುದು ಹೇಗೆ? ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಈ ಭರವಸೆಗಳನ್ನು ಈಡೇರಿಸಿದ್ದಾರಾ? ಅವರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಆಗಲಿಲ್ಲ.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇದ್ದಾಗ ನಾವು ಕೊಟ್ಟ 165 ಭರವಸೆಗಳಲ್ಲಿ 158 ಈಡೇರಿಸಲಾಯ್ತು. ಇದರ ಜತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮ ನೀಡಿದ್ದೇವೆ. ನಾವು ಉತ್ತಮ ಆಡಳಿತ ನೀಡಿದ್ದರೂ ಜನ ನಮ್ಮನ್ನು ಬೆಂಬಲಿಸಲಿಲ್ಲ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದೆವು. ನಾನು 40 ವರ್ಷ ಅವರ ಕುಟುಂಬದ ವಿರುದ್ಧ ರಾಜಕೀಯ ಹೋರಾಟ ಮಾಡಿಕೊಂಡು ಬಂದರೂ, ರಾಜ್ಯದ ಹಿತಕ್ಕಾಗಿ ಮೈತ್ರಿ ಸರ್ಕಾರದಲ್ಲಿ ಅವರಿಗೆ ಬೆಂಬಲ ನೀಡಿ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಮಗೆ ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಕೆಲಸ ಮಾಡಿದೆವು. ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲಿಲ್ಲ.
ಇದನ್ನೂ ಓದಿ: Siddaramaiah : 'ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ'
ಇದು ಪ್ರಜ್ಞಾವಂತ ಮತದಾರರ ಕ್ಷೇತ್ರ. ತಮ್ಮಯ್ಯ, ನಂಜಪ್ಪ ಅವರು ನನ್ನ ಜತೆ ಶಾಸಕರಾಗಿದ್ದರು. ವಿಶ್ವನಾಥ್ ಹಾಗೂ ಮಂಚನಹಳ್ಳಿ ಮಹದೇವ್ ಅವರು ಶಾಸಕರಾಗಿದ್ದರು. ನಾನು ಇಲ್ಲಿಗೆ ಬರುವ ಮುನ್ನ ವಿಶ್ವನಾಥ್ ಅವರ ಮನೆಗೆ ಹೋಗಿದ್ದೆ. ಅವರು ಪ್ರಜ್ಞಾವಂತ ಶಾಸಕರಾಗಿದ್ದಾರೆ. ಅವರ ಬಳಿ ಅವರದೇ ಆದ ಸ್ವಾರಸ್ಯ, ರಹಸ್ಯವಿದೆ. ಅವರು ಒಂದು ಮಾತು ಹೇಳಿದರು. ನಾನು ಎಲ್ಲಾ ಪಕ್ಷ ನೋಡಿದೆ. ನಾನು ಸಾಯುವ ಮುನ್ನ ಕಾಂಗ್ರೆಸಿಗನಾಗಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದು, ಕಾಂಗ್ರೆಸ್ ರಾಷ್ಟ್ರಧ್ವಜ ನೀಡಿದ್ದಾರೆ. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದು, ನೀನು ಸಮಾಜದಲ್ಲಿ ಬದಲಾವಣೆ ಬಯಸಿದರೆ, ಪ್ರಾಣ ಒತ್ತೆ ಇಟ್ಟಾದರೂ ಸರಿ ಬದಲಾವಣೆಗಾಗಿ ಹೋರಾಡಬೇಕು.
ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಾವು ಮಾಡಿದ ಸಾಧನೆ ನಮ್ಮನ್ನು ಸದಾ ಜೀವಂತವಾಗಿ ಇಡುತ್ತದೆ. ಅದೇ ರೀತಿ ಕೆಆರ್ ಎಸ್ ಕಟ್ಟಿದ ಮಹಾರಾಜರು, ಉಳುವವನೆ ಭೂಮಿಯ ಒಡೆಯ ಎಂದು ಭೂಮಿ ಕೊಟ್ಟ ದೇವರಾಜ ಅರಸು ಅವರನ್ನು ನಾವು ಸ್ಮರಿಸುತ್ತೇವೆ. ನಾವು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ಕೊಟ್ಟೆವು. ಸಂಸತ್ ಚುನಾವಣೆಯಲ್ಲಿ ನಾವಿಬ್ಬರೂ ಜೋಡೆತ್ತು ಎಂದು ಹೇಳಿದರು. ಆ ಮಟ್ಟಿಗೆ ಬೆಂಬಲವಾಗಿ ನಾನು ನಿಂತಿದ್ದೆ. ಅವರಿಗೆ ನಾನು ಮೋಸ ಮಾಡಿದ್ದೀನಾ? ಅವರ ಮಗನ ಪರವಾಗಿ ನಾನು ಹೋರಾಡಿದೆ. ಐದು ವರ್ಷ ಅಧಿಕಾರ ಮಾಡಲು ನಾವು ಬೆಂಬಲ ನೀಡಿದೆವು. ದೇವೇಗೌಡರನ್ನು ಕಾಂಗ್ರೆಸ್ ಪಕ್ಷವು ಪ್ರಧಾನಿಯನ್ನಾಗಿ ಮಾಡಿತು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ಜನರ ಜೀವನದಲ್ಲಿ ಬದಲಾವಣೆ ಆಯಿತಾ ಎಂದು ನೋಡಬೇಕು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ನಾನು ಇಲ್ಲಿ ಅವರನ್ನು ದೂಷಿಸುವುದಿಲ್ಲ, ಬಯ್ಯುವುದಿಲ್ಲ. ಆದರೆ ನಾನು ನಿಮ್ಮ ಮನೆ ಮಗ, ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ಕೇಳಲು ಬಂದಿದ್ದೇನೆ. ಇಲ್ಲಿ ಕೇವಲ ರವಿಶಂಕರ್ ಮಾತ್ರ ಅಭ್ಯರ್ಥಿಯಲ್ಲ, ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಅಭ್ಯರ್ಥಿ.
ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆ, ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುವುದಾಗಿ ರಾಹುಲ್ ಗಾಂಧಿ ಅವರು ಹೇಳಿದ್ದು, ನಾನು ಅದಕ್ಕೆ ಬದ್ಧವಾಗಿದ್ದೇನೆ. ನಿಮ್ಮ ಬದುಕು ಹಸನಾಗಬೇಕು, ಎಲ್ಲ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ನಿಮ್ಮ ಬದುಕಲ್ಲಿ ಬದಲಾವಣೆ ನೀಡಲಿದೆ. ಕಾಂಗ್ರೆಸ್ ಸರ್ಕಾರ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ, ರೈತರಿಗೆ ಉಚಿತ ವಿದ್ಯುತ್ ಕಾರ್ಯಕ್ರಮ ನೀಡಿದ್ದೇವೆ. ಈ ಸರ್ಕಾರ ಯಾವುದಾದರೂ ಒಂದು ಜನಪರ ಕಾರ್ಯಕ್ರಮ ನೀಡಿದೆಯಾ? ಆದರೆ ಬಿಜೆಪಿ ಸರ್ಕಾರ ರೈತ ವಿರೋಧಿ ಕಾಯ್ದೆ ತಂದಿತು. ನಾವು ಅದರ ವಿರುದ್ಧ ಹೋರಾಟ ಮಾಡಿದೆವು. ರೈತರ ಹೋರಾಟಕ್ಕೆ ಮಣಿದು ಪ್ರಧಾನಿ ಕಾಯ್ದೆ ಹಿಂಪಡೆದರು. ನೀವು ನಮಗೆ ಶಕ್ತಿ ನೀಡಿ, ನಾವು ನಿಮ್ಮ ಜೀವನದಲ್ಲಿ ಬದಲಾವಣೆ ತರುತ್ತೇವೆ.
ಇದನ್ನೂ ಓದಿ: ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ: ಕಾಂಗ್ರೆಸ್
ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ರೈತರ ರಕ್ಷಣೆ ಮಾಡಲಿಲ್ಲ, ಸಾಂಪ್ರದಾಯಿಕ ವೃತ್ತಿ ಅವಲಂಬಿಸಿದವರಿಗೆ ನೆರವು ನೀಡಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಸತ್ತರು. ಆದರೆ ಮಂತ್ರಿ ಮಾತ್ರ ಕೇವಲ 3 ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದರು. ನಾನು ಸಿದ್ದರಾಮಯ್ಯ ಅವರು ಬಂದು ಪರಿಶೀಲನೆ ನಡೆಸಿದೆವು. ನಂತರ ನಾನು ಪ್ರತಿ ಮನೆಗೂ ಹೋಗಿ ಪಕ್ಷದ ಪರವಾಗಿ ತಲಾ 1 ಲಕ್ಷ ಪರಿಹಾರ ನೀಡಿ ಸಾಂತ್ವನ ಹೇಳಿದೆ. ಪ್ರಧಾನಿಗಳು ಕೋವಿಡ್ ಸಮಯದಲ್ಲಿ ಚಪ್ಪಾಳೆ, ಜಾಗಟೆ ಹೊಡೆಯಲು ಹೇಳಿದರು ಎಂದು ಡಿಕೆಶಿ ಕಿಡಿ ಕಾರಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.