ಬೆಂಗಳೂರು: ಯುವಕನ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಶಾಂತಿನಗರ ಶಾಸಕ ಎನ್​.ಎ. ಹ್ಯಾರಿಸ್​ ಪುತ್ರನ ಪತ್ತೆಗೆ ಎಸಿಪಿ ಮಂಜುನಾಥ್​ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಮಧ್ಯಾಹ್ನ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿದ್ವತ್ ಆರೋಗ್ಯ ವಿಚಾರಣೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು, ಆರೋಪಿ ಮಹಮ್ಮದ್ ನಲಪಾಡ್​​ನನ್ನು ತಕ್ಷಣ ಬಂಧಿಸುವಂತೆ ಪೊಲೀಸ್​ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.


ಪ್ರಕರಣದ ಕೂಲಂಕಷ ತನಿಖೆ ನಡೆಸಿ ಆರೋಪಿಗಳನ್ನು ಸಂಜೆಯೊಳಗೆ ಬಂಧಿಸುವಂತೆ ಬೆಂಗಳೂರು ಪೊಲೀಸರಿಗೆ ಗೃಹ ಸಚಿವರು ಆದೇಶಿಸಿದ್ದಾರೆ. 


ಇದನ್ನೂ ಓದಿ : ಕಾಂಗ್ರೆಸ್​ ಸದಸ್ಯತ್ವದಿಂದ ಮೊಹಮ್ಮದ್​ ಹ್ಯಾರಿಸ್ ನಳಪಾಡ್ 6 ವರ್ಷ ಉಚ್ಚಾಟನೆ


ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಆದರೆ, ಮುಖ್ಯ ಆರೋಪಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಇನ್ನೂ ಪತ್ತೆಯಾಗಿಲ್ಲ.


ಇದನ್ನೂ ಓದಿ : ಬೆಂಗಳೂರಿನಲ್ಲಿ ಶಾಸಕನ ಪುತ್ರನಿಂದ ಯುವಕನ ಮೇಲೆ ಹಲ್ಲೆ


ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್ ಇಲ್ಲಿನ ಯುಬಿ ರೆಸ್ಟೋರೆಂಟ್ನಲ್ಲಿ ಶನಿವಾರ ರಾತ್ರಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಮೊಹಮ್ಮದ್ ಹ್ಯಾರಿಸ್ ನಳಪಾಡ್ ಮತ್ತು ಇತರ 10 ಮಂದಿ ವಿರುದ್ಧ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.