ಪತಿ ಜಗದೀಶ್ ಮತ್ತು ಮಾವನೊಂದಿಗೆ ಜೆಡಿಎಸ್ ಸೇರ್ಪಡೆಗೊಂಡ ನಟಿ ಅಮೂಲ್ಯ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ನಟಿ ಅಮೂಲ್ಯ.
ಬೆಂಗಳೂರು: ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಅಮೂಲ್ಯ ತಮ್ಮ ಪತಿ ಮತ್ತು ಮಾವ ರಾಮಚಂದ್ರ ಅವರೊಂದಿಗೆ ನಗರದ ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಪಕ್ಷದಲ್ಲಿ ನನಗೆ ಅನ್ಯಾಯ ಆಗಿದೆ ಎಂದು ತಿಳಿಸಿರುವ ರಾಜ ರಾಜೇಶ್ವರಿ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೂಲ್ಯ ಮಾವ ರಾಮಚಂದ್ರ, ಎರಡು ಬಾರಿ ಪ್ರಯತ್ನಪಟ್ಟರೂ ಬಿಜೆಪಿ ಟಿಕೆಟ್ ಸಿಗದ ಕಾರಣ ನಾನು ಜೆಡಿಎಸ್ ಸೇರಿದ್ದೇನೆ. ಜೆಡಿಎಸ್ ನಲ್ಲಿ ನನಗೆ ಟಿಕೆಟ್ ಕೊಡುವುದು ಬಿಡುವುದು ದೇವೇಗೌಡರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟಿ ಅಮೂಲ್ಯ, ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನನ್ನ ಮಾವನಿಗೆ ಟಿಕೇಟ್ ಸಿಕ್ಕರೆ ಅವರ ಪರವಾಗಿ ಪ್ರಚಾರ ನಡೆಸುತ್ತೇನೆ. ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದರು.
ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ
ದಿನೇ ದಿನೇ ಪಕ್ಷ ಬಲಿಷ್ಠವಾಗುತ್ತಿದೆ. ನಾನು ಯಾವಾಗಲೂ ದೈವದಲ್ಲಿ ನಂಬಿಕೆ ಇಟ್ಟವನು. ಜನರ ಆಶೀರ್ವಾದ ಕುಮಾರಸ್ವಾಮಿಗೆ ಸಿಗುತ್ತಿದೆ. ಒಂದೆರಡು ದಿನಗಳಲ್ಲಿ ಸಾಕಷ್ಟು ಅನ್ಯ ಪಕ್ಷದ ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಬೆಂಗಳುರಿನಲ್ಲೇ ಕನಿಷ್ಠ 12 ರಿಂದ 15 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದ ದೇವೇಗೌಡರು ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ತಿಳಿಸಿದರು.