ಡಿ.ಕೆ.ಶಿವಕುಮಾರ್ಗೆ ಟೀಕೆ ಮಾಡಿ ಕಡೆಗೆ ಅಣ್ಣ ಎಂದ ಸಚಿವ ಆರ್. ಅಶೋಕ್
ಅಧಿವೇಶನ ಕರೆದರೆ ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಡಿ.ಕೆ. ಶಿವಕುಮಾರ್ ಅವರ ಬಳಿ ದುಡ್ಡಿದ್ದರೆ ರಾಜ್ಯದ ಜನರಿಗೆ ಕೊಡಲಿ ಎಂದಿದ್ದರು.
ನವದೆಹಲಿ: ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಸಚಿವ ಆರ್. ಅಶೋಕ್ (R Ashok) ನಡುವೆ ವಾಗ್ಯುದ್ದ ಶುರುವಾಗಿದೆ. ಪ್ರತಿಪಕ್ಷದ ನಾಯಕನಾಗಿ ಸರ್ಕಾರದ ನಡೆಗಳನ್ನು ಟೀಕಿಸಿದ್ದ ಡಿ.ಕೆ. ಶಿವಕುಮಾರ್ ಹೇಳಿಕೆಗಳಿಗೆ ಅಶೋಕ ತಿರುಗೇಟು ನೀಡಿದ್ದಾರೆ.
ಕರೋನಾವೈರಸ್ (Coronavirus) ಮತ್ತು ಲಾಕ್‌ಡೌನ್ (Lockdown) ಅವಾಂತರಗಳ ಬಗ್ಗೆ ಚರ್ಚಿಸಲು ವಿಧಾನಸಭೆ ಅಧಿವೇಶನ ಕರೆಯಬೇಕೆಂದು ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಶೋಕ್, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ನಡೆಯುತ್ತದೆ. ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ ನಡೆಯುತ್ತಿಲ್ಲ ಎಂದಿದ್ದಾರೆ.
ಅಲ್ಲದೆ ಕಾಂಗ್ರೆಸ್ ಪಕ್ಷದವರೇ ಡಿ.ಕೆ. ಶಿವಕುಮಾರ್ ಮಾತು ಕೇಳುವುದಿಲ್ಲ. ನಾವ್ಯಾಕೆ ಡಿ.ಕೆ. ಶಿವಕುಮಾರ್ ಮಾತು ಕೇಳಬೇಕು? ಎಂದು ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅವರು ಸಲಹೆ ಕೊಡಲಿ. ಅವುಗಳನ್ನು ನಾವು ಕೇಳುತ್ತೇವೆ. ಅದರ ಹೊರತು ಡಿ.ಕೆ. ಶಿವಕುಮಾರ್ ಮಾತಿಗೆ ಕವಡೇ ಕಾಸಿನ ಕಿಮ್ಮತ್ತು ಇಲ್ಲ ಎಂದರು.
ಅಧಿವೇಶನ ಕರೆದರೆ ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಡಿ.ಕೆ. ಶಿವಕುಮಾರ್ (DK Shivakumar) ಅವರ ಬಳಿ ದುಡ್ಡಿದ್ದರೆ ರಾಜ್ಯದ ಜನರಿಗೆ ಕೊಡಲಿ. ಹೊಸದಾಗಿ ಮದುವೆ ಆದವರಿಗೆ ಹನಿಮೂನ್ ಗೆ ಹೋಗಬೇಕು, ಟೂರ್ ಹಾಗಬೇಕು ಎಂಬ ಆಸೆ ಇರುವಂತೆ ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಏನೇನೋ ಆಸೆ ಇದೆ ಎಂದು ವ್ಯಂಗ್ಯವಾಡಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಏನೇನು ಆಸೆ ಇವೆ ಎಂಬುದನ್ನು ಸ್ಮಾರ್ಟ್ ಆಗಿ ಹೇಳಲಿ, ಓವರ್ ಸ್ಮಾರ್ಟ್ ಆಗಿ ಹೇಳೋದು ಬೇಡ ಎಂದು ಕಾಲೆಳೆದರು. ಇಷ್ಟೆಲ್ಲಾ ಟೀಕೆ ಮಾಡಿದ ಬಳಿಕ 'ಡಿ.ಕೆ ಶಿವಕುಮಾರ್ ಅವರು ನನಗೆ ಅಣ್ಣ ಇದ್ದಂತೆ, ನಾನು ಅವರಿಗೆ ತಮ್ಮ ಇದ್ದಂತೆ' ಎಂದು ಕೂಡ ಹೇಳಿದ್ದಾರೆ.