ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಜಿಲ್ಲೆ ಹಸಿರುವಲಯದಲ್ಲಿ ಗುರ್ತಿಸಿಕೊಂಡಿದೆ. ಮೇ 3ರ ಬಳಿಕವು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು (B Sriramulu) ಹೇಳಿದರು.


COMMERCIAL BREAK
SCROLL TO CONTINUE READING

ಕೋವಿಡ್-19 (Covid-19) ತಡೆಯುವಿಕೆ ಮತ್ತು ಲಾಕ್‌ಡೌನ್ (Lockdown) ಪರಿಸ್ಥಿತಿಯ ಜಾರಿ ಹಾಗೂ ಜಿಲ್ಲೆಯ ಸಮಸ್ಯೆ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ವಿಶ್ವದಾದ್ಯಂತ ಆವರಿಸಿದ್ದು ತಲ್ಲಣ ಉಂಟು ಮಾಡುತ್ತಿದೆ ಇದರ ನಿಯಂತ್ರಣಕ್ಕಾಗಿ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಶ್ರಮಿಸುತ್ತಿದ್ದು ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರವು ಅತ್ಯವಶ್ಯಕವಾಗಿದೆ ಎಂದರು.


ಜಿಲ್ಲೆಗೆ ಹೊರಭಾಗದಿಂದ ಎಲ್ಲರನ್ನು ಕ್ವಾರಂಟೈನ್‌ (Quarantine)ಗೆ ಒಳಪಡಿಸಲಾಗಿದ್ದು ಯಾರಲ್ಲೂ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ ಜಿಲ್ಲಾಡಳಿತ, ಆರೋಗ್ಯ, ಪೊಲೀಸ್ ಇಲಾಖೆಯ ಪರಿಶ್ರಮದಿಂದಾಗಿ ಜಿಲ್ಲೆ ಹಸಿರು ವಲಯದಲ್ಲಿ ಗುರ್ತಿಸಿಕೊಂಡಿದೆ ಎಂದು ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಅವರು ಕೋವಿಡ್ ಸೋಂಕು ಮೇ.೦೩ ಬಳಿಕ ಸಂಪೂರ್ಣ ನಿಯಂತ್ರಣ ಕಷ್ಟಸಾಧ್ಯ ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಿ ಇದರ ನಿಯಂತ್ರಣಕ್ಕೆ ಪಣತೊಡಬೇಕು ಎಂದ ಹೇಳಿದರು.


ಕೋವಿಡ್ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ರಕ್ತನಿಧಿ ಸಂಗ್ರಹದ ಕೊರತೆಯುಂಟಾಗಿದ್ದು ಎಲ್ಲಾ ಜಿಲ್ಲೆಗಳಲ್ಲಿಯೂ ರಕ್ತದಾನ  ಶಿಬಿರಗಳನ್ನು ಏರ್ಪಡಿಸುವ ಕೆಲಸವಾಗಬೇಕು ಈ ಬಗ್ಗೆ ಉಚಿತವಾಗಿ ಟೋಲ್ ಫ್ರೀ ಸಂಖ್ಯೆ ನೀಡುವ ಮೂಲಕ ರಕ್ತದಾನಿಗಳ ಹೆಸರು ಪಡೆದು ಅವರಿಗೆ ಜಿಲ್ಲಾಡಳಿತ ಸೂಕ್ತವ್ಯವಸ್ಥೆ ಕಲ್ಪಿಸಬೇಕು ಎಂದ ಅವರು ಕೆಂಪು ವಲಯದಿಂದ ಬಂದವರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೇ ಸರ್ಕಾರದಿಂದ ಸೋಂಕು ನಿಯಂತ್ರಣಕ್ಕೆ ಬೇಕಾಗಿರುವ ಅವಶ್ಯಕ ಮಾಸ್ಕ್, ಪಿ,ಪಿ.ಇ ಕಿಟ್ ಸೇರಿದಂತೆ ಅಗತ್ಯ ಸುರಕ್ಷಾ ಸಾಧನಗಳನ್ನು ಒದಗಿಸಲಾಗಿದೆ ಎಂದರು.


ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 2500 ವೈದ್ಯರ ಕೊರತೆ ಇದ್ದು ಕೋವಿಡ್ ಕಾರಣದಿಂದಾಗಿ ಇದರ ನೇಮಕಾತಿ ಸಾಧ್ಯವಾಗಿಲ್ಲ ಸದ್ಯ ಪರಿಸ್ಥಿತಿ ಸುಧಾರಣೆ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಅಲ್ಲದೇ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಬದ್ದವಾಗಿದ್ದು ಈ ಬಗ್ಗೆ ಭಯಪಡುವುದು ಬೇಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಇದರ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.


ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಮಾತನಾಡಿ ಹೊರ ದೇಶ,  ಹೊರ ರಾಜ್ಯ ಹಾಗೂ ಯಾವುದೇ ಭಾಗದ ಕೆಂಪು ವಲಯದಿಂದ ಬಂದ ವ್ಯಕ್ತಿಗಳಿದ್ದಲ್ಲಿ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಿಸಬೇಕು. ಜಿಲ್ಲೆಯು ಸದ್ಯ ಹಸಿರು ವಲಯದಲ್ಲಿದ್ದು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಗಡಿಭಾಗಗಳಲ್ಲಿ ಭದ್ರತೆಗೊಳಿಸಬೇಕು ಎಂದರು.


ಕೋರೋನಾ ಕಾರಣದಿಂದಾಗಿ ಜಿಲ್ಲೆಯಲ್ಲಿ ಯಾರೊಬ್ಬರು ಹಸಿವಿನಿಂದ ಬಳಲುಬಾರದು ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆದು ಪ್ರತಿಯೊಬ್ಬರಿಗೂ ಆಹಾರದ ವ್ಯವಸ್ಥೆ ಕಲ್ಪಿಸಬೇಕು ಜೊತೆಗೆ  ವಲಸೆ ಕಾರ್ಮಿಕರಿದ್ದಲ್ಲಿ ಅವರುಗಳನ್ನು ತಮ್ಮ ಊರುಗಳಿಗೆ ಕಳುವಹಿಸಲು ಕ್ರಮ ಕೈಗೊಳ್ಳಿ ಎಂದರು.


ಶಾಸಕರಾದ ಬೆಳ್ಳಿ ಪ್ರಕಾಶ್ ಹಾಗೂ ಎಂ.ಪಿ ಕುಮಾರಸ್ವಾಮಿ ತಮ್ಮ ಕ್ಷೇತ್ರದಲ್ಲಿನ  ಕೋವಿಡ್-19 ಕ್ರಮಗಳು ಹಾಗೂ ಅಹವಾಲುಗಳನ್ನು ಸಚಿವರ ಗಮನಕ್ಕೆ ತಂದು ಪರಿಹರಿಸುವಂತೆ ಕೇಳಿಕೊಂಡರು.


ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧಮೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.