ಚಾಮರಾಜನಗರ : ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ 108 ಅಡಿ ಮಲೆಮಹದೇಶ್ವರನ ಪ್ರತಿಮೆ ಇದೇ ಮಾರ್ಚ್ 18 ರಂದು ಲೋಕಾರ್ಪಣೆಗೊಳ್ಳುತ್ತಿದೆ. 


COMMERCIAL BREAK
SCROLL TO CONTINUE READING

ಅಸಂಖ್ಯಾತ ಭಕ್ತರ ಪಾಲಿನ ದೈವ ‘ಮಾಯ್ಕರ ಮಾದಪ್ಪ’ನ ನೆಲದಲ್ಲಿ ಮುಗಿಲೆತ್ತರದಲ್ಲಿರುವ 108 ಅಡಿ ಪ್ರತಿಮೆ ಮೊದಲನೇ ಹಂತದ ಕಾಮಗಾರಿ‌ ಮುಗಿದಿದ್ದು  ಮುಖ್ಯಮಂತ್ರಿ, ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಬಸವರಾಜ ಬೊಮ್ಮಾಯಿ ಮಾ.18ರಂದು ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆ ಆಗಲಿದೆ.


ಇದನ್ನೂ ಓದಿ : Karnataka Congress : ನಾಳೆ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ? ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!


₹20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ. 


ಗದಗದ ಸಿಎಸ್‌ಎಪಿ ಆರ್ಕಿಟೆಕ್ಟ್‌ ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎಂಬುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರ್ಡೇಶ್ವರದ ಶಿವನ ಮೂರ್ತಿ, ಬಸವ ಕಲ್ಯಾಣದದಲ್ಲಿ ಬೃಹತ್‌ ಬಸವಣ್ಣನ ಪ್ರತಿಮೆಗಳ ರೂವಾರಿ ಇವರು. 


ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದು.


108 ಅಡಿ ಎತ್ತರ ‌ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ.


ಕಲ್ಲುಬಂಡೆಯಾಕೃತಿಯ ರಚನೆಯಲ್ಲಿ ಗುಹೆಯ ಮಾದರಿಯಲ್ಲಿ ಎರಡು ಮಹಡಿಗಳಿವೆ. ತಳಭಾಗದಲ್ಲಿ ಮಹದೇಶ್ವರ ಬೆಟ್ಟದ ಚಾರಿತ್ರಿಕ ಹಿನ್ನಲೆ ಸಾರುವ ಕಲಾಕೃತಿ ಚಿತ್ರಗಳ ರಚನೆ, ಭಕ್ತರ ವಿಶ್ರಾಂತಿ ಸ್ಥಳಾವಕಾಶ ಸೇರಿದಂತೆ ಭಕ್ತರು, ಪ್ರವಾಸಿಗರಿಗೆ ಮಹದೇಶ್ವರ ಚರಿತ್ರೆ, ಪರಂಪರೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ. 


ತರಾತುರಿ ಕಾರ್ಯಕ್ರಮ ಆರೋಪ :  ಚುನಾವಣಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. 


ಒಂದು ಹಂತದ ಕಾಮಗಾರಿಯಷ್ಟೇ ಮುಗಿದಿದೆ. ಆಷ್ಟರಲ್ಲೇ, ಉದ್ಘಾಟನಾ ಭಾಗ್ಯ ಕಾಣುತ್ತಿದೆ.  ಪ್ರಸ್ತುತ ಹುಲಿಯ ಮೇಲೆ ಕುಳಿತ 108 ಅಡಿ ಎತ್ತರದ ಸ್ವಾಮಿಯ ಮೂರ್ತಿ ಮಾತ್ರ ಪೂರ್ಣಗೊಂಡಿದೆ. ಪ್ರತಿಮೆ ಕೆಳಗೆ ಪೀಠ ನಿರ್ಮಾಣ ಮಾಡಲಾಗಿದ್ದು, ಗುಹೆಯಂತಿರುವ ಈ ಸ್ಥಳದಲ್ಲಿ ನಿರ್ಮಿತಗೊಳ್ಳುತ್ತಿರುವ ಮಹದೇಶ್ವರರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಕಾಮಗಾರಿ ಮುಗಿದಿಲ್ಲ, ಇಲ್ಲಿಗೆ ಭಕ್ತರು ಬರಲು ಸಮರ್ಪಕವಾದ ರಸ್ತೆ ನಿರ್ಮಾಣವಾಗಿಲ್ಲ, ಕುಡಿಯುವ ನೀರು, ಶೌಚಗೃಹ, ವಾಹನ ಪಾರ್ಕಿಂಗ್ ಮತ್ತು ಮೂಲಸೌಕರ್ಯಗಳಿಲ್ಲ ಈ ರೀತಿ ಇಲ್ಲಗಳ ನಡುವೆ ಕಣ್ಣಿಗೆ ದೊಡ್ಡದಾಗಿ ಕಾಣುವಂತೆ ಸಿದ್ಧಗೊಂಡಿರುವ 108 ಅಡಿ ಪ್ರತಿಮೆಯನ್ನು ಮಾತ್ರ ಉದ್ಘಾಟಿಸುತ್ತಿರುವುದು ಏತಕ್ಕೆ..? ಎಂದು ಭಕ್ತರು ಕಿಡಿಕಾರಿದ್ದಾರೆ.


ಒಟ್ಟಿನಲ್ಲಿ ಚುನಾವಣಾ ಕಾಲದಲ್ಲಿ ಧಾರ್ಮಿಕ ಕ್ಷೇತ್ರವೂ ಬಳಕೆಯಾಗುತ್ತಿರುವುದು ವಿಪರ್ಯಾಸವಾಗಿದೆ.


ಇದನ್ನೂ ಓದಿ : B Sriramulu : ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಶೇ.15 ರಷ್ಟು ವೇತನ ಹೆಚ್ಚಳ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.