ಬೆಂಗಳೂರು: ಸಿದ್ರರಾಮಣ್ಣ ಮುಖ್ಯಮಂತ್ರಿಯೇ ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೇ ಎಂದು ಕಾಂಗ್ರೆಸ್‍ನಲ್ಲಿ ಸಂಗೀತ ಕುರ್ಚಿ ಆರಂಭವಾಗಿದೆ. ಅಕ್ಟೋಬರ್ ವೇಳೆಗೆ ಕಾಂಗ್ರೆಸ್ ಪಕ್ಷ ಎರಡು ಹೋಳಾಗಲಿದೆ.ಬಿಜೆಪಿ ಮತ್ತೆ 150 ಶಾಸಕರ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.


COMMERCIAL BREAK
SCROLL TO CONTINUE READING

ಬೆಂಗಳೂರು ಮಹಾನಗರ ಬಿಜೆಪಿ ವತಿಯಿಂದ ಇಂದು ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‍ಮುಕ್ತ ಕರ್ನಾಟಕ ಮಾಡಲು ನಾವು ಸಿದ್ಧರಾಗಬೇಕಿದೆ. ನವ ಭಾರತದ ನಿರ್ಮಾಣಕ್ಕೆ ನವ ಕರ್ನಾಟಕ ಸಾಕ್ಷಿ ಆಗಬೇಕು ಎಂದು ತಿಳಿಸಿದರು.


ವಿಧಾನಸಭಾ ಉಪಚುನಾವಣೆ, ವಿಧಾನಪರಿಷತ್ ಚುನಾವಣೆ, ಪಾಲಿಕೆಗಳ ಚುನಾವಣೆಗಳಲ್ಲಿ ಬಿಜೆಪಿ ಅಲೆ ಸ್ಪಷ್ಟವಾಗಿದೆ. ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದ್ದರಿಂದ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ಅಲೆಯನ್ನು ಕಂಡು ಕಾಂಗ್ರೆಸ್‍ಗೆ ದಿಗಿಲಾಗಿದೆ. ಡಿಜೆ. ಹಳ್ಳಿ, ಕೆ.ಜಿ.ಹಳ್ಳಿಯ ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪರ ನಿಲ್ಲದ ಆ ಪಕ್ಷದ ಮುಖಂಡರು ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತಿತರರಿಗೆ ಜೈ ಹೇಳುತ್ತಾರೆ. ದೇಶದ ಪರವಾಗಿ ಜಯಕಾರ ಕೂಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಭಾರತ್ ಮಾತಾ ಕಿ ಜೈ ಕೇವಲ ಬಿಜೆಪಿಯಲ್ಲಿದೆ ಎಂದರು.


ಅಧಿಕಾರದಲ್ಲಿ ಇಲ್ಲದಾಗ ಗಲಭೆ ಎಬ್ಬಿಸುವುದು ಕಾಂಗ್ರೆಸ್ ಪಕ್ಷದ ಇತಿಹಾಸ. ರಾಜ್ಯದಲ್ಲೂ ಅಧಿಕಾರದ ಆಸೆಗಾಗಿ ಸಿದ್ರಾಮಣ್ಣ- ಡಿ.ಕೆ.ಶಿವಕುಮಾರ್ ಗ್ಯಾಂಗ್ ಅರಾಜಕತೆಯನ್ನು ಸೃಷ್ಟಿಸಲು ಹೊರಟಿದೆ. ಸಾಫ್ಟ್ ಕಾರ್ನರ್ ಹಿಂದುತ್ವದ ಮಾತನಾಡುವ ಸಿದ್ದರಾಮಯ್ಯರ ಅಧಿಕಾರದ ಅವಧಿಯಲ್ಲಿ 23 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಆಗ ಯಾಕೆ ನಿಮಗೆ ಕಣ್ಣೀರು ಬಂದಿಲ್ಲ ಎಂದು ಪ್ರಶ್ನಿಸಿದರು. ಆಗ ಹಿಂದೂಗಳು, ಮಹಿಳೆಯರಿಗೆ ರಕ್ಷಣೆ ಇರಲಿಲ್ಲ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿತ್ತು ಎಂದು ಟೀಕಿಸಿದರು. ಬಸವರಾಜ ಬೊಮ್ಮಾಯಿ, ರೈತಪರ ಹೋರಾಟಗಾರ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಇನ್ನೊಬ್ಬ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ 3 ತಂಡಗಳ ಪ್ರವಾಸ ಮಾಡಲಾಗಿದೆ. ಜಿಲ್ಲಾ ಸಮಿತಿ, ಮಂಡಲ ಸಮಿತಿ, ಮತಗಟ್ಟೆ ಸಮಿತಿಗಳ ಜೊತೆ ಸಂವಾದ ನಡೆದಿದೆ. ಪಕ್ಷದ ಅಭೂತಪೂರ್ವ ಸಾಧನೆಯ ಮುನ್ಸೂಚನೆ ಲಭಿಸಿದೆ ಎಂದರು.


ಕೋವಿಡ್ ನಡುವೆಯೂ ಯಡಿಯೂರಪ್ಪ ಅವರ ಆಡಳಿತಾವಧಿ, ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ನಿರಂತರವಾಗಿ ಮುನ್ನಡೆದಿದೆ. ಮೋದಿಯವರು ದೇಶದ ಪ್ರಧಾನ ಸೇವಕರಾಗಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಕಾಮನ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಇದು ಬಿಜೆಪಿ ಆಡಳಿತದ ಭಿನ್ನತೆ ಎಂದರು. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಅಮೃತ ಯೋಜನೆಗಳು, ಪರಿಶಿಷ್ಟ ಜಾತಿ ಪಂಗಡದವರಿಗೆ ಉಚಿತ ವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಕೆಂಪೇಗೌಡರ ಕನಸನ್ನು ನನಸು ಮಾಡುವತ್ತ ಬಿಜೆಪಿ ಹೆಜ್ಜೆಗಳನ್ನು ಇಟ್ಟಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ವಿಶೇóಷ ಯೋಜನೆಗಳನ್ನು ಪ್ರಕಟಿಸಿದೆ ಎಂದು ತಿಳಿಸಿದರು.


ಇದನ್ನು ಓದಿ: ಬಾಡಿಗೆ ಕೇಳುವ ನೆಪದಲ್ಲಿ ಮನೆಯನ್ನೇ ದೋಚುತ್ತಾರೆ ಹುಷಾರ್!


ಕಾಂಗ್ರೆಸ್ ಪಕ್ಷ ಬೆಂಗಳೂರಿಗೆ ಗೂಂಡಾಗಿರಿಯನ್ನಷ್ಟೇ ನೀಡಿತ್ತು. ನಿಮ್ಮ ಶಾಸಕರು ತಮ್ಮನ್ನು ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಕುರಿತು ಡಿ.ಕೆ.ಶಿವಕುಮಾರ್ ಮತ್ತು ಸಿದ್ರಾಮಣ್ಣ ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.ಕೇವಲ ಅಧಿಕಾರಕ್ಕಾಗಿ ಬಿಜೆಪಿಯನ್ನು ರಚಿಸಿಲ್ಲ. ಜಗದ್ವಂದ್ಯ ಭಾರತ ನಿರ್ಮಾಣದ ಚಿಂತನೆಯೊಂದಿಗೆ ಪಕ್ಷ ರಚಿಸಲಾಯಿತು. ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬ ಚಿಂತನೆಯೂ ಇದರಲ್ಲಿ ಸೇರಿದೆ. ಇದೇ ಆಧಾರದಲ್ಲಿ ಪಕ್ಷ ಮುನ್ನಡೆದಿದೆ ಎಂದು ನುಡಿದರು. ಇದೇ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದಾಗ ಜಗತ್ತಿನಲ್ಲಿ ಪರಿವರ್ತನೆ ತರಲು ನಮಗೆ ಸಾಧ್ಯವಾಯಿತು ಎಂದರು.


2014ರಲ್ಲಿ ನರೇಂದ್ರ ಮೋದಿಯವರ ಸರಕಾರ ಕೇಂದ್ರದಲ್ಲಿ ರಚನೆಯಾಯಿತು. ಆಗ ಜಗದ್ವಂದ್ಯ ಭಾರತ ನಿರ್ಮಾಣದ ಸಂಕಲ್ಪ ಮಾಡಿದ ಮೋದಿಯವರು ಅದನ್ನು ಸಾಕಾರಗೊಳಿಸುವತ್ತ ದೃಢವಾಗಿ ಮುನ್ನಡೆದಿದ್ದಾರೆ ಎಂದರು. ಜಗತ್ತಿನ ದೇಶಗಳು ಭಾರತವನ್ನು ಕೊಂಡಾಡುತ್ತಿವೆ. ಸಹಾಯಕ್ಕಾಗಿ ಭಾರತದತ್ತ ನೋಡುತ್ತಿವೆ. ಅಮೇರಿಕದ ಅಧ್ಯಕ್ಷರು ಭಾರತವನ್ನು ಆತ್ಮೀಯ ಮಿತ್ರದೇಶ ಎಂದು ಕರೆಯುತ್ತಾರೆ. ಅಮೆರಿಕ, ಬ್ರಿಟನ್ ಮತ್ತಿತರ ದೇಶಗಳ ಮುಖಂಡರು ನರೇಂದ್ರ ಮೋದಿಯವರನ್ನು ಮಿತ್ರರನ್ನಾಗಿ ಗೌರವದಿಂದ ಕಾಣುತ್ತಿದ್ದಾರೆ ಎಂದು ತಿಳಿಸಿದರು.


ರಷ್ಯಾ- ಉಕ್ರೇನ್ ಯುದ್ಧ ನಡೆದಾಗ ಎರಡೂ ರಾಷ್ಟ್ರದ ಮುಖಂಡರ ಜೊತೆ ಮಾತನಾಡಿದ ಏಕೈಕ ಪ್ರಧಾನಿ ನಮ್ಮ ಮೋದಿಯವರು. ಕೋವಿಡ್ ಅವಧಿಯಲ್ಲೂ ಜಗತ್ತು ಭಾರತದತ್ತ ನೋಡಿತ್ತು ಎಂದು ನುಡಿದರು. ಭಾರತದ ಕೀರ್ತಿ ಎತ್ತರಿಸುವ ಕೆಲಸವನ್ನು ನಮ್ಮ ಕೇಂದ್ರ ಸರಕಾರ ಮತ್ತು ಪ್ರಧಾನಿ ಮಾಡುತ್ತಿದ್ದಾರೆ. ಯುದ್ಧದ ವೇಳೆ 19,500 ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಯಿತು ಎಂದು ವಿವರಿಸಿದರು.


ಸುಮಾರು 7 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಚಿದಂಬರಂ, ಸಿದ್ದರಾಮಣ್ಣ, ಖರ್ಗೆ ಕುಟುಂಬದ ಗರೀಬಿ ಹಠಾವೋ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಮನೆಯವರ ಗರೀಬಿ ಹಠಾವೋ ಆಗಿದೆ. ಆದರೆ, ಈ ದೇಶದ ಬಡವರ ಗರೀಬಿ ಹಠಾವೋ ಆಗಲಿಲ್ಲ ಎಂದು ಟೀಕಿಸಿದರು. ಈ ದೇಶದ ಬಡವರ ಗರೀಬಿ ಹಠಾವೋ ಮಾಡಿದ್ದು ನರೇಂದ್ರ ಮೋದಿ ಸರಕಾರ ಎಂದು ತಿಳಿಸಿದರು.


ಇದನ್ನು ಓದಿ: ರಾಜ್ಯದಲ್ಲಿ ತರಕಾರಿ ಬೆಲೆ ಕೊಂಚ ಏರಿಳಿತ: ಇಂದಿನ ದರ ಇಂತಿದೆ


ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆಯ ಮೂಲಕ ಸಿಲಿಂಡರ್ ನೀಡಿಕೆ, ಶೌಚಾಲಯಗಳ ಮೂಲಕ ಬಡಮಹಿಳೆಯರ ಕಣ್ಣೀರು ಒರೆಸಿದ ಕೀರ್ತಿ ನಮ್ಮ ಪ್ರಧಾನಿಯವರದು. 17 ಸಾವಿರ ಕತ್ತಲೆಯ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ ಮತ್ತು ಬಡವರ ಕಲ್ಯಾಣ ಮಾಡಿದ ಸರಕಾರ ನಮ್ಮದು. ಕಿಸಾನ್ ಸಮ್ಮಾನ್ ಜಾರಿ ಮಾಡಿದೆ ಎಂದರು.


ಕೇಂದ್ರದಿಂದ ಬಿಡುಗಡೆ ಮಾಡಿದ 100 ರೂಪಾಯಿಯಲ್ಲಿ 99 ರೂಪಾಯಿ ಸೋರಿಕೆಯಾಗುತ್ತದೆ. ಕೇವಲ ಒಂದು ರೂಪಾಯಿ ಫಲಾನುಭವಿಗೆ ಸಿಗುತ್ತದೆ ಎಂದು ರಾಜೀವ್ ಗಾಂಧಿ ಹೇಳಿದ್ದರು. ಆದರೆ, ಬಿಜೆಪಿ ಸರಕಾರವು ಆವಾಸ್ ಯೋಜನೆ, ಜನ್‍ಧನ್ ಸೇರಿ ಎಲ್ಲ ಯೋಜನೆಗಳನ್ನು ಭ್ರಷ್ಟಾಚಾರರಹಿತವಾಗಿ ಜಾರಿಗೊಳಿಸಿದೆ. ಬಡವರ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ತ್ವರಿತ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.