ಕರ್ನಾಟಕ ಉಪಚುನಾವಣೆ ಮತಎಣಿಕೆ ಆರಂಭ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?
ಶಿವಮೊಗ್ಗದಲ್ಲಿ ಶೇ,61.05, ಬಳ್ಳಾರಿಯಲ್ಲಿ ಶೇ.63.85, ಮಂಡ್ಯದಲ್ಲಿ ಶೇ.53.95, ರಾಮನಗರದಲ್ಲಿ ಶೇ.73.71, ಜಮಖಂಡಿ ಶೇ.81.58 ಮತದಾನವಾಗಿತ್ತು.
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯ ವಿಚಾರವಾಗಿರುವ ಈ ಉಪಚುನಾವಣೆ ಮತಎಣಿಕೆ ಎಲ್ಲಾ ಐದು ಕ್ಷೇತ್ರಗಳಲ್ಲಿ ಆರಂಭವಾಗಿದೆ.
ಜಮಖಂಡಿ ವಿಧಾನಸಭಾ ಕ್ಷೇತ್ರ
ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಕಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ನ್ಯಾಮಗೌಡ ಮತ್ತು ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ನಡುವೆ ಸ್ಪರ್ಧೆ ನಡೆಯಲಿದೆ.
ರಾಮನಗರ ವಿಧಾನಸಭಾ ಕ್ಷೇತ್ರ
ರಾಮನಗರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಅನಿತಾ ಕುಮಾರಸ್ವಾಮಿ ಮತ್ತು ಪಕ್ಷೇತ್ರ ಅಭ್ಯರ್ಥಿಗಳಾದ ಹೆಚ್.ಡಿ.ರೇವಣ್ಣ, ಕುಮಾರನಾಯ್ಕ್, ಡಿ.ಎಂ.ಮಾದೇಗೌಡ, ಮುನಿಯಪ್ಪ, ಸುರೇಂದ್ರ ರಾಮನಗರ ನಡುವೆ ಸ್ಪರ್ಧೆ ನಡೆಯಲಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರ
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಸಹೋದರಿ ಜಿ. ಶಾಂತಾ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಉಗ್ರಪ್ಪ ಸೇರಿದಂತೆ ಒಟ್ಟು 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿ ಅಭ್ಯರ್ಥಿಯಾಗಿ ಮಧುಬಂಗಾರಪ್ಪ, ಬಿಜೆಪಿಯ ಬಿ.ವೈ.ರಾಘವೇಂದ್ರ, ಜೆಡಿಯುನ ಮಹಿಮಾ ಪಟೇಲ್ ಸೇರಿದಂತೆ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರ
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪಕ್ಷೇತರರೂ ಸೇರಿ ಒಟ್ಟು 9 ಮಂದಿ ಅಭ್ಯರ್ಥಿಗಳಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ಇಂದು ಮಧ್ಯಾಹಂದೊಳಗೆ ತಿಳಿಯಲಿದೆ.
ನವೆಂಬರ್ 3 ರಂದು ನಡೆದ ಮತದಾನದಲ್ಲಿ ಶಿವಮೊಗ್ಗದಲ್ಲಿ ಶೇ,61.05, ಬಳ್ಳಾರಿಯಲ್ಲಿ ಶೇ.63.85, ಮಂಡ್ಯದಲ್ಲಿ ಶೇ.53.95, ರಾಮನಗರದಲ್ಲಿ ಶೇ.73.71, ಜಮಖಂಡಿ ಶೇ.81.58 ಮತದಾನವಾಗಿತ್ತು.