ಕೊರೊನಾಗೆ ಕರ್ನಾಟಕ ತತ್ತರ: SSLC-PUC ಪರೀಕ್ಷೆ ಮುಂದೂಡಿಕೆ
ಇದೇ ಮಾರ್ಚ್ 27 ರಿಂದ ಆರಂಭವಾಗಬೇಕಿದ್ದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯನ್ನು ಮುಂದೂಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಕರೋನಾ ವೈರಸ್ (Coronavirus) ಭೀತಿಯಿಂದಾಗಿ ರಾಜ್ಯದಲ್ಲಿ ಮಾರ್ಚ್ 27 ರಿಂದ ಆರಂಭವಾಗಬೇಕಿದ್ದ 2020 ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ಇಂದು ನಡೆಯಬೇಕಿದ್ದ ಪಿಯುಸಿ (PUC) ಪರೀಕ್ಷೆಯನ್ನು ರಾಜ್ಯ ಶಿಕ್ಷಣ ಇಲಾಖೆ ಮುಂದೂಡಿದೆ.
2020ನೇ ಸಾಲಿನ ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆಯನ್ನು ಮಾರ್ಚ್ 27 ರಿಂದ ಏಪ್ರಿಲ್ 9 ರವರೆಗೆ ನಿಗದಿಗೊಳಿಸಲಾಗಿತ್ತು. ಇದಲ್ಲದೆ ಪಿಯುಸಿ ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ಮಾರ್ಚ್ 23(ಇಂದು) ಆಂಗ್ಲ ಭಾಷೆ ಪರೀಕ್ಷೆ ನಡೆಯಬೇಕಿತ್ತು. ಆದರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಕಷ್ಟವಾಗಬಹುದು ಎಂಬುದನ್ನು ಮನಗಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
SSLC-PUC ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದಲ್ಲದೇ ಕೋವಿಡ್-19 (Covid-19)ರ ಭೀತಿಯಿಂದಾಗಿ ಈಗಾಗಲೇ ಮುಂದೂಡಲ್ಪಟ್ಟಿರುವ 7 ರಿಂದ 9 ನೇ ತರಗತಿ ಪರೀಕ್ಷೆಗಳಿಗೂ ಸಹ ಮಾರ್ಚ್ 31 ರೊಳಗೆ ನೂತನ ವೇಳಾಪಟ್ಟಿ ಘೋಷಿಸುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ.