ತಿದ್ದುಪಡಿ ಮಾಡಿ ಹೊಸ ಪಠ್ಯಪುಸ್ತಕ ಮುದ್ರಿಸಲು ಶಿಕ್ಷಣ ಇಲಾಖೆ ತೀರ್ಮಾನ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈಗಾಗಲೇ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಟ್ಟುಹೋದ ಅಂಶಗಳನ್ನು ತಿದ್ದುಪಡಿ ಹಾಗೂ ಸೇರ್ಪಡೆ ಮಾಡಿ ತಿದ್ದೋಲೆ ಹೊರಡಿಸಲು ಅನುಮತಿ ನೀಡಿ ಆದೇಶಿಸಿದೆ.
ಬೆಂಗಳೂರು: ಕಳೆದ ಹಲವಾರು ದಿನಗಳಿಂದ ತೀವ್ರ ವಿರೋಧಕ್ಕೆ ಒಳಗಾದ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಇದೀಗ ಕೊಂಚ ತಣ್ಣಗಾಗುತ್ತಿದೆ. ಇದೇ ಸಂದರ್ಭದಲ್ಲಿ ಪಠ್ಯಪುಸ್ತಕದಲ್ಲಿ ಕಂಡು ಬಂದ ತಪ್ಪುಗಳನ್ನು ತಿದ್ದುಪಡಿ ಮಾಡಿ ಹೊಸ ಪಠ್ಯಪುಸ್ತಕ ಮುದ್ರಿಸಿ ವಿತರಣೆ ಮಾಡಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ. ಪಠ್ಯಪುಸ್ತಕಗಳು ಮುದ್ರಿಸಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ವಿತರಿಸಲಾಗುತ್ತದೆ. ತಿದ್ದುಪಡಿ ಮಾಡಿದ ಅಂಶಗಳನ್ನು ಜಾಲತಾಣದಲ್ಲಿ ಸಾಫ್ಟ್ ಪ್ರತಿಗಳನ್ನಾಗಿ ಪ್ರಕಟಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಮೇಲೆ ದಾಳಿ ನಡೆಸಲು IT, ED & CBIಗಳಿಗೆ ಭಯವೇ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈಗಾಗಲೇ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಟ್ಟುಹೋದ ಅಂಶಗಳನ್ನು ತಿದ್ದುಪಡಿ ಹಾಗೂ ಸೇರ್ಪಡೆ ಮಾಡಿ ತಿದ್ದೋಲೆ ಹೊರಡಿಸಲು ಅನುಮತಿ ನೀಡಿ ಆದೇಶಿಸಿದೆ.
9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿರುತ್ತದೆ. ಅದರಲ್ಲಿ ಪರಿಷ್ಕೃತ ಪಠ್ಯದಲ್ಲಿ ʼಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು "ಸಂವಿಧಾನದ ಶಿಲ್ಪಿ" ಕರೆಯಲಾಗಿದೆʼ ವಾಕ್ಯವು ಇಲ್ಲವಾಗಿದ್ದು, ಇದೀಗ "ಸಂವಿಧಾನದ ಶಿಲ್ಪಿ" ಎಂಬ ಪದವನ್ನು ಮತ್ತೆ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2 ರಲ್ಲಿ ಭಕ್ತಿಪಂಥ ಎಂಬ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರ ಕುರಿತು ಮಾಹಿತಿ ನೀಡಲಾಗಿದೆ. 7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147 ರಲ್ಲಿ ʼಗೊಂಬೆ ಕಲಿಸುವ ನೀತಿ' ಪದ್ಯದ ಕೃತಿಕಾರರ ಹೆಸರು ಡಾ. ಆರ್.ಎನ್.ಜಯಗೋಪಾಲ್' ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ ರವರ ಕವಿ ಪರಿಚಯ ನೀಡಲಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ʼನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕʼ ಪಾಠದಲ್ಲಿ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಕುರಿತಾದ ಸೇವೆಯ ಸಾಲುಗಳನ್ನು ನೀಡಲಾಗಿದೆ. 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಮೈಸೂರು ಮತ್ತು ಇತರ ಸಂಸ್ಥಾನಗಳು ಎಂಬ ಪಾಠದಲ್ಲಿದ್ದ ಸುರಪುರ ನಾಯಕರ ಕುರಿತಾದ ವಿವರಗಳನ್ನು ನೀಡಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಪಠ್ಯಪುಸ್ತಕದಲ್ಲಿ ಭಾರತದ ಮತ ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶ ನೀಡಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ ಭಾಗ -2 ರ ಪಠ್ಯಪುಸ್ತಕದ ʼಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿವಿವಾದಗಳು' ಎಂಬ ಪಾಠದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಹುಯಿಲಗೋಳ ನಾರಾಯಣರಾವ್‌ರವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. 4ನೇ ತರಗತಿಯ ಪರಿಸರ ಅಧ್ಯಯನದ 'ಪ್ರತಿಯೊಬ್ಬರು ವಿಶಿಷ್ಟʼ ಎಂಬ ಪಾಠದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪುರವರಿಗೆ ಚಿಕ್ಕಂದಿನಿಂದಲು ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು ಎಂಬ ವಾಕ್ಯದ ನಂತರ ʼಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರುʼ ಎಂಬ ಸಾಲು ಇದೆ. ಅದನ್ನು ಕೈಬಿಡಲಾಗಿದೆ.
ಇದನ್ನೂ ಓದಿ: ITR ದಾಖಲಿಸುವ ಈ ಜನರಿಗೆ 2.5 ಲಕ್ಷ ರೂ.ಗಳ ಹೆಚ್ಚುವರಿ ವಿನಾಯ್ತಿ ಸಿಗಲಿದೆ
ಸಾಮಾನ್ಯವಾಗಿ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆಗಳಾದಾಗ ಅಗತ್ಯವಾದ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡುವುದು. ಶಿಕ್ಷಣ ಇಲಾಖೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪಕ್ರಿಯೆಯಾಗಿದೆ. ಅಗತ್ಯವಿರುವ ತಿದ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಪಠ್ಯಪುಸ್ತಕ ಮುದ್ರಣಕ್ಕೆ ಕಾರ್ಯಾದೇಶ ಪಡೆದಿರುವ ಎಲ್ -೧ ದರ ನಮೂದಿಸಿರುವ ಮುದ್ರಕರಿಂದ ಮುದ್ರಿಸಿ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಿಗೆ, ಅನುದಾನ ರಹಿತ ಶಾಲೆಗಳಿಗೆ ಉಚಿತವಾಗಿ ವಿತರಿಸಲು ಆದೇಶ ನೀಡಲಾಗಿದೆ. ತಿದ್ದೋಲೆ ವಿಷಯಾಂಶಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ಜಾಲತಾಣದಲ್ಲಿ ಪ್ರಕಟಿಸಲು ಸರ್ಕಾರ ಆದೇಶಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ