Karnataka Textbook Revision: ಪಠ್ಯದಿಂದ ತನ್ನ ಕಥೆ ಕೈಬಿಡಿ ಎಂದು ಸರ್ಕಾರಕ್ಕೆ ದೇವನೂರು ಪತ್ರ
ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧವೂ ಸಾಹಿತಿ ದೇವನೂರು ಮಹಾದೇವ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬೆಂಗಳೂರು: ಪಠ್ಯ ಪುಸ್ತಕದ ವಿವಾದ ಬೆನ್ನಲ್ಲೇ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ ಕಥೆಯನ್ನು ಪಠ್ಯದಿಂದ ಕೈಬಿಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಶಾಲಾ ಪಠ್ಯದಲ್ಲಿ ಕೇಸರೀಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು ತಮ್ಮ ಕಥೆಯನ್ನು ಪಠ್ಯದಿಂದ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ‘ಪಠ್ಯ ಪರಿಷ್ಕರಣೆ ಬಗ್ಗೆ ನಡೆಯುತ್ತಿರುವ ವಾದ-ವಿವಾದಗಳನ್ನು ನಾನು ಗಮನಿಸುತ್ತಿದ್ದೇನೆ. 10ನೇ ತರಗತಿಯ ಪಠ್ಯದಲ್ಲಿ ನನ್ನದೂ ಒಂದು ಕಥನವಿದೆ ಎಂಬುದು ಗಮನಕ್ಕೆ ಬಂದಿದೆ. ಪರಿಷ್ಕರಣೆ ವಿಚಾರದಲ್ಲಿ ಗಳಿಗೆಗೊಂದು ಬದಲಾವಣೆ ಆಗುತ್ತಿದೆ. ಹೀಗಾಗಿ ಈ ಪಠ್ಯದಲ್ಲಿ ನನ್ನ ಕಥೆ ಸೇರಿಸದಿದ್ದರೆ ನನಗೆ ಸಂತೋಷವಾಗುತ್ತದೆ’ ಎಂದು ಹೇಳಿದ್ದಾರೆ.
ವಿವಾದಕ್ಕೆ ಸಾಕ್ಷಿಯಾದ ಪಠ್ಯಪುಸ್ತಕ ಪರಿಷ್ಕರಣೆ: ಹಳೆ ಪುಸ್ತಕ ನೀಡುವಂತೆ ಪೋಷಕರು, ಶಿಕ್ಷಣ ತಜ್ಞರ ಆಗ್ರಹ
ಈ ಹಿಂದೆ ತಾವು ಶಾಲಾ ಪಠ್ಯದಲ್ಲಿ ತಮ್ಮ ಕಥೆ ಸೇರಿಸಿ ಎಂದು ನೀಡಿರುವ ಅನುಮತಿಯನ್ನು ವಾಪಾಸ್ ಪಡೆದಿರುವುದಾಗಿಯೂ ಪತ್ರದಲ್ಲಿ ದೇವನೂರು ಮಹಾದೇವ ಉಲ್ಲೇಖಿಸಿದ್ದಾರೆ. ಎಲ್.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕ್ಕರ್ ಮುಂತಾದವರ ಬರಹಗಳನ್ನು ಪಠ್ಯದಿಂದ ಕೈ ಬಿಡಲಾಗಿದೆ. ಇವರ ಪಠ್ಯ ಕೈಬಿಟ್ಟವರಿಗೆ ಕನ್ನಡ, ನಾಡು-ನುಡಿ, ಸಂಸ್ಕೃತಿ ಬಗ್ಗೆ ಏನೇನು ತಿಳಿದಿಲ್ಲವೆಂದೇ ಅರ್ಥ ಅಂತಾ ಅವರು ಕಿಡಿಕಾರಿದ್ದಾರೆ.
ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧವೂ ದೇವನೂರು ಮಹಾದೇವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಲೇಖಕರ ಜಾತಿ ಹುಡುಕಲು ಹೋಗಿಲ್ಲ’ವೆಂಬ ರೋಹಿತ್ ಚಕ್ರತೀರ್ಥ ಹೇಳಿಕೆಗೆ ಹಿರಿಯ ಸಾಹಿತಿ ಬೇಸರ ವ್ಯಕ್ತಪಡಿಸಿದ್ದಾರೆ. 'ಭಾರತದಂತಹ ಸಂಕೀರ್ಣವಾದ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಸಹಜವಾಗಿ ಅಲ್ಲಿ ಶೇ.90ರಷ್ಟು ಅವರದ್ದೇ ಜಾತಿಯವರು ತುಂಬಿಕೊಳ್ಳುತ್ತಾರೆ. ಅವರವರ ಅಡಿಗೆ ಮನೆ ವಾಸನೆ ಪ್ರಿಯವಾಗುವಂತೆ' ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ
ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದೆ. ಇದು ಈಗಿನದ್ದಲ್ಲ. ಡಾ.ಮುರಳಿ ಮನೋಹರ ಜೋಶಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುವರ್ಣ ಹಿಂದೂ ಪ್ರಭೇದದ ಆರ್‌ಎಸ್‍ಎಸ್ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ಇಲ್ಲೂ ಇದೇ ಆಗಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.