ಕಾಸರಗೋಡು: ಕನ್ನಡಿಗರಿಗೆ ಉದ್ಯೋಗದಲ್ಲಿ‌ ಮೀಸಲಾತಿ ನೀಡುವ ಸಂಬಂಧ ಸರ್ಕಾರದ ‌ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕಾಸರಗೋಡಿನ ಎಡನೀರು ಮಠದ‌‌‌ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ವಿತರಣೆ ಮಾಡಿ ಅವರು ಮಾತನಾಡಿದರು. 


ಕೈಗಾರಿಕಾ ನೀತಿ 2020-25 ರಲ್ಲೂ ರಾಜ್ಯ ಸರ್ಕಾರದ ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ನಿಯಮವಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಈ ಬಗ್ಗೆ  ಈಗಾಗಲೇ ಒಂದೆರೆಡು ಸಭೆಗಳನ್ನು ನಡೆಸಲಾಗಿದೆ.  ಕನ್ನಡಿಗರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ: ಮನೆ ಬಿಟ್ಟು ಹೋಗಿದ್ದ 10ರ ಬಾಲಕ ಪತ್ತೆ : ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ನಿರ್ಧಾರ ಏಕೆ..? 


ಮರಾಠಿಗರು ನಮ್ಮ ಜಲ, ಇಲ್ಲಿನ ಗಾಳಿ‌ ಹಾಗೂ ಎಲ್ಲ  ಸವಲತ್ತನ್ನು ಪಡೆದು ನಮ್ಮ ವಿರುದ್ಧವೇ ಮಾತನಾಡುತ್ತಾರೆ‌. ಅದಕ್ಕೆ ಕೇರಳ ರಾಜ್ಯ ಗಡಿ ಭಾಗದಲ್ಲಿನ ವಾತಾವರಣ ವಿರುದ್ಧವಾಗಿದೆ ಎಂದು ಎಂಇಎಸ್ ವಿರುದ್ಧ ಸಚಿವರು ಕಿಡಿಕಾರಿದರು.


ಗಡಿಯಲ್ಲಿ ಮಾತ್ರವಲ್ಲ, ಗಡಿಯ ಹೊರಗಿನ‌ ಜಿಲ್ಲೆಯಲ್ಲೂ ಕನ್ನಡ ಭಾಷೆ ಸುರಕ್ಷಿತವಾಗಿದೆ. ‌ನನಗೆ ನಿಜಕ್ಕೂ ಕೇರಳದಲ್ಲಿ‌ ಇದ್ದೇನೆ ಎನ್ನುವ ಭಾವನೆ  ಮೂಡುತ್ತಿಲ್ಲ. ಗಡಿ ಹೊರಗೆ ನಮ್ಮ ಕನ್ನಡದ ಕಂಪು ಆ ಮಟ್ಟಕ್ಕೆ‌ ಪಸರಿಸಿದೆ‌. ಸಚ್ಚಿದಾನಂದ ಭಾರತೀ ಶ್ರೀಗಳು‌‌ ಈ ಭಾಗದಲ್ಲಿ ಕನ್ನಡ ಶಾಲೆ ತೆರೆದು ಕನ್ನಡ ಅಭಿವೃದ್ಧಿಗೆ ತಮ್ಮದೇ‌ ಆದ  ರೀತಿಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.   


ಬೇರೆ ಭಾಷಿಕರನ್ನು ನಾವು ಗೌರವಿಸಬೇಕು. ಅದರೊಟ್ಟಿಗೆ ಅವರಿಗೆ ಕನ್ನಡ ಕಲಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಸಲಹೆ ನೀಡಿದರು. ಕಾಸರಗೋಡು ಜಿಲ್ಲೆಯಲ್ಲಿ 202 ಕನ್ನಡ ಮಾಧ್ಯಮದ ಶಾಲೆಗಳಿರುವುದು ಸಂತಸದ ವಿಚಾರ. ಗಡಿ ಭಾಗದ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರು ಇಂದು ನಮ್ಮೊಂದಿಗಿಲ್ಲ. ಅವರ ನೆನಪಿಗಾಗಿ ಕನ್ನಡ ಭವನ‌ ಕಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಈ ಭಾಗದಲ್ಲಿ ಶಾಲಾ ಕೊಠಡಿ, ಕನ್ನಡ ಭವನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ‌. ಮುಂದೆಯೂ ಇಲಾಖೆ ವತಿಯಿಂದ ಇಲ್ಲಿನ ಕನ್ನಡ ಶಾಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.  


ಇದನ್ನೂ ಓದಿ: Crime News: ಬೆಚ್ಚಗೆ ಮಲಗಿದ್ದ ಜಾಗದಲ್ಲೇ ಹರಿದ ರೌಡಿಶೀಟರ್ ನೆತ್ತರು 


ಕೇರಳ‌ ಸರ್ಕಾರ ನಮಗೆ ಕನ್ನಡ ಭವನ ಕಟ್ಟಲು ಸ್ಥಳ ನೀಡಿ ಕನ್ನಡ ಭಾಷಿಕರಿಗೆ ಸಹಕಾರ ನೀಡುತ್ತಿದೆ.‌ ಆದರೆ ಗೋವಾದಲ್ಲಿ ನಾವೇ ಹಣ ಕೊಡುತ್ತೇವೆ ಎಂದರೂ ಅಲ್ಲಿನ ಸರ್ಕಾರ ಕನ್ನಡ ಭವನ ನಿರ್ಮಾಣಕ್ಕೆ ಸ್ಥಳ ನೀಡುತ್ತಿಲ್ಲ ಎಂದು ದೂರಿದರು.‌


ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಭಾಷೆ ಹಾಗೂ ಕನ್ನಡದ ಮಹನೀಯರ ವಿಚಾರದಲ್ಲಿ ವಿಶೇಷ ಕಾಳಜಿ‌ ಹೊಂದಿದ್ದಾರೆ. ಈ ಹಿಂದಿನ‌ ಬಿಜೆಪಿ ಸರ್ಕಾರದ‌ ಪುಣ್ಯತ್ಮರು ಯಾವುದೇ ಪ್ರಶಸ್ತಿ ಕೊಡದೇ‌ ಹಾಗೇ ಬಾಕಿ ಬಿಟ್ಟು ಹೋಗಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ‌ ಗಮನಕ್ಕೆ ತರಲಾಗಿತ್ತು. ಅದಕ್ಕೆ‌ ಗೌರವಾನ್ವಿತ ಮುಖ್ಯಮಂತ್ರಿಗಳು ಮೂರು ಕೋಟಿಯಲ್ಲ, ಹತ್ತು ಕೋಟಿ‌ ಆದರೂ ಸರಿ ಪ್ರಶಸ್ತಿ ವಿತರಣೆ ಮಾಡಿ. ಈ ಮೂಲಕ‌ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಬೇಕು ಎಂದಿದ್ದರು ಎಂದು ಸಚಿವರು ಸಿದ್ದರಾಮಯ್ಯ ಅವರ ಭಾಷಾ ಕಾಳಜಿ ಬಗ್ಗೆ ಸ್ಮರಿಸಿದರು.‌


ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ, ಜಗತ್ತಿನಲ್ಲಿ‌ ಎಲ್ಲ‌‌ಭಾಷೆಗಳು ಅದರದ್ದೆ ಮಹತ್ವ ಹೊಂದಿದೆ. ಜಗತ್ತಿನಲ್ಲಿ‌ 6 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ.‌ ಎಷ್ಟೋ ಭಾಷೆಗಳಿಗೆ ವರ್ಣ ಮಾಲೆಗಳಿಲ್ಲ. ಇಂಗ್ಲೀಷ್ ಭಾಷೆ ಕಣ್ಣು ಬಿಡುವ ಮುನ್ನವೇ ಅಂದರೆ 500 ವರ್ಷಗಳ ಹಿಂದೆಯೇ ಕನ್ನಡ ಭಾಷೆಯಲ್ಲಿ ಪುರಾಣ‌ ಹಾಗೂ ಮಹಾ ಕಾವ್ಯಗಳು ರಚನೆಯಾಗಿವೆ ಎಂದು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದರು.‌


ಆಡಳಿತದಲ್ಲಿ‌ ಕನ್ನಡ,‌ ಶಿಕ್ಷಣದಲ್ಲಿ ಕನ್ನಡ ಹಾಗೂ  ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ  ನೀಡಿಕೆ. ಈ ಮೂರು ಯೋಜನೆಗಳನ್ನು ಇಟ್ಟುಕೊಂಡಾಗ ಮಾತ್ರ ಭಾಷೆಯನ್ನು ಉಳಿಸಬಹುದು ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.