ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಡಿ.ಕೆ.‌ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ಮಧ್ಯಾಹ್ನ 3.30ಕ್ಕೆ ನಡೆಸಲಿದೆ.


COMMERCIAL BREAK
SCROLL TO CONTINUE READING

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ತಮ್ಮ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ ಡಿ.ಕೆ‌. ಶಿವಕುಮಾರ್ ಪರ ಮತ್ತು ಜಾರಿ ನಿರ್ದೇಶನಾಲಯದ ಪರ ವಕೀಲರು ವಿಚಾರಣೆ ಮುಂದೂಡಿಕೆಗೆ ಮನವಿ ಮಾಡಿದರು. ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆಕ್ಷೇಪಣೆಯನ್ನು ಹಾಗೂ ತನಿಖಾ ವರದಿಯನ್ನು ಓದಿ ಅದಕ್ಕೆ ತಕ್ಕಂತೆ ವಾದ ಮಂಡಿಸಲು ಅನುಕೂಲವಾಗುವಂತೆ ಅಕ್ಟೋಬರ್15 ವಿಚಾರಣೆ ಮುಂದೂಡುವಂತೆ ಡಿ.ಕೆ. ಶಿವಕುಮಾರ್ ಪರ ವಕೀಲ ದಯನ್ ಕೃಷ್ಣನ್ ಮನವಿ ಮಾಡಿದರು. ಇವರಿಗೆ ಮತ್ತೊಂದು ಕಾರಣವೂ ಇತ್ತು. ಡಿ.ಕೆ. ಶಿವಕುಮಾರ್ ಪರ ವಾದ ಮಾಡುತ್ತಿರುವ ವಕೀಲರ ತಂಡದ ನಾಯಕ ಅಭಿಷೇಕ್ ಮನು ಸಿಂಘ್ವಿ ಸೋಮವಾರ ವಾದ ಮಂಡನೆಗೆ ಲಭ್ಯವಿರಲಿಲ್ಲ. ಇನ್ನೊಂದೆಡೆ ಅಕ್ಟೋಬರ್15ಕ್ಕೆ ಡಿ‌.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದ್ದು ಅಂದು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗುವುದು. ಆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ನೋಡಿಕೊಂಡು ವಾದ ಮಂಡಿಸಲು ಅನುವಾಗುವಂತೆ ಬುಧವಾರ ಅಥವಾ ಗುರುವಾರಕ್ಕೆ ವಿಚಾರಣೆ ಮುಂದೂಡುವಂತೆ ಜಾರಿ ನಿರ್ದೇಶನಾಲಯದ ಪರ ವಕೀಲರು ಮನವಿ ಮಾಡಿದರು.


ಇಬ್ಬರ ಮನವಿ ಆಲಿಸಿದ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ 'ನಿಮಗೆ ಬೇಕಾದಂತೆ ಕಾಲವಕಾಶ ನೀಡಲು ಸಾಧ್ಯವಿಲ್ಲ' ಎಂದು ತಿಳಿಸಿ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 3.30ಕ್ಕೆ ನಿಗದಿ ಪಡಿಸಿದರು. ಹಿಂದಿನ ವಿಚಾರಣೆ ಸಂದರ್ಭದಲ್ಲಿ ದಸರಾ ರಜೆ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ತಿಳಿಸಿದ್ದರು. ಅದರಂತೆ ಸೋಮವಾರ ವಿಚಾರಣೆ ನಡೆಸಿದ್ದರು.


ಇಂದು ಡಿ.ಕೆ.‌ ಶಿವಕುಮಾರ್ ಪರ ವಕೀಲರು 'ಡಿ.ಕೆ. ಶಿವಕುಮಾರ್ ಈಗಾಗಲೇ 28 ದಿನ ನ್ಯಾಯಂಗ ಬಂದನದಲ್ಲಿದ್ದಾರೆ.‌ ತಿಹಾರ್  ಜೈಲಿನಲ್ಲಿದ್ದಾಗಲೂ 2 ದಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡಿಸಿದ್ದಾರೆ. ಇದಕ್ಕೂ ಮೊದಲು 19 ದಿನ ಇಡಿ ಕಸ್ಟಡಿ ಮತ್ತು ಸಮನ್ಸ್ ವೇಳೆ ವಿಚಾರಣೆ ಆಗಿತ್ತು. ಒಟ್ಟು 21 ದಿನಗಳ ವಿಚಾರಣೆ ಆಗಿದೆ. ಡಿ.ಕೆ. ಶಿವಕುಮಾರ್ ಅನಾರೋಗ್ಯದ ನಡುವೆಯೂ ತನಿಖೆಗೆ ಸ್ಪಂದಿಸಿದ್ದಾರೆ. ಪ್ರಕರಣದ ಸಂಬಂಧ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ, ಸಂಸದ ಮತ್ತು ಸಹೋದರ ಡಿ.ಕೆ. ಸುರೇಶ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಉದ್ಯಮಿ ಸುನಿಲ್ ಕುಮಾರ್ ಶರ್ಮಾ ಅವರ ವಿಚಾರಣೆ ಕೂಡ ಮುಕ್ತಾಯದ ಹಂತದಲ್ಲಿದೆ. ಆದುದರಿಂದ ಇನ್ನು ಡಿ.ಕೆ. ಶಿವಕುಮಾರ್ ಅವರನ್ನು ನ್ಯಾಯಂಗ ಬಂಧನದಲ್ಲಿಡುವ ಅಗತ್ಯವಿಲ್ಲ.‌ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳಿಗೆ ಬದ್ದರಾಗಿರಲಿದ್ದಾರೆ. ಅವರಿಗೆ ಜಾಮೀನು ನೀಡಿ' ಎಂದು ಮನವಿ ಮಾಡಲಿದ್ದಾರೆ.


ನಾಳೆ ಜಾರಿ ನಿರ್ದೇಶನಾಲಯದ ಪರ ವಕೀಲರು 'ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ, ಪತ್ನಿ ಉಷಾ ಹಾಗೂ ಅವರ ಕುಟುಂಬಕ್ಕೆ ಮತ್ತು ವ್ಯವಹಾರಗಳಿಗೆ ಸಂಬಂಧಿಸಿದಂತೆ ಇನ್ನೂ 51 ಮಂದಿಯ ವಿಚಾರಣೆ ನಡೆಸಬೇಕಿದೆ. ಜೊತೆಗೆ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ, ಸಂಸದ ಮತ್ತು ಸಹೋದರ ಡಿ.ಕೆ. ಸುರೇಶ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಉದ್ಯಮಿ ಸುನಿಲ್ ಕುಮಾರ್ ಶರ್ಮಾ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಬೇಕಿದೆ. ಈ ಹಂತದಲ್ಲಿ ಡಿ‌.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಿದರೆ ಅವರು ಇವರೆಲ್ಲರ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಹಾಗಾಗಿ ತನಿಖೆ ಪೂರ್ಣ ಪ್ರಮಾಣದಲ್ಲಿ ಮುಗಿಯುವವರೆಗೂ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಬೇಡಿ' ಎಂದು ಮನವಿ ಮಾಡಲಿದ್ದಾರೆ.


ಸೋಮವಾರ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್,‌ 'ಡಿ.ಕೆ. ಶಿವಕುಮಾರ್ ಅವರ ಅರ್ಜಿ ವಿಚಾರಣೆ ನಾಳೆಗೆ(ಮಂಗಳವಾರಕ್ಕೆ) ಮುಂದೂಡಿಕೆ ಆಗಿದೆ. ನಮ್ಮ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಆಗಮಿಸುವುದು ತಡವಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಪಾಸ್ ಓವರ್ ಮಾಡುವಂತೆ ಕೇಳಿದ್ದೆವು. ನ್ಯಾಯಾಲಯ ಒಪ್ಪಿಕೊಂಡಿಲ್ಲ.‌ ಮಂಗಳವಾರದಿಂದ ವಿಚಾರಣೆ ನಡೆಯಲಿದೆ. ಈ ಮಧ್ಯೆ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಯಾಲಯಕ್ಕೆ ತನಿಖೆಯ ಪ್ರಗತಿ ಕುರಿತ ವರದಿ ನೀಡಿದ್ದಾರೆ. ಒಟ್ಟಿನಲ್ಲಿ ಜಾಮೀನು ಸಿಗುವುದನ್ನು ತಪ್ಪಿಸಲು ಏನು ಬೇಕು ಅದನ್ನು ಮಾಡುತ್ತಿದ್ದಾರೆ' ಎಂದು ಹೇಳಿದರು.